ADVERTISEMENT

ವಿಶ್ವನಾಥ್‌ ಹೇಳಿದ ನಿಖಿಲ್‌ ನಿಶ್ಚಿತಾರ್ಥದ ಹಾರದ ಕತೆ!

ರಾಜಕಾರಣಿಗಳ ಆರ್ಥಿಕ ಬಲ ಹೆಚ್ಚಾಗುತ್ತಿರುವುದಕ್ಕೆ ವಿಶ್ವನಾಥ ಕಳವಳ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 15:06 IST
Last Updated 7 ಮಾರ್ಚ್ 2020, 15:06 IST
   

ಧಾರವಾಡ: ‘ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕಾರಣಿಗಳ ಆರ್ಥಿಕ ಬಲ ಹೆಚ್ಚಾಗುತ್ತಿರುವುದು ಕಳವಳಕಾರಿ. ಇತ್ತೀಚೆಗೆಬಳ್ಳಾರಿಯಿಂದ ಬೆಂಗಳೂರುವರೆಗೂ ನಡೆದ ಸಚಿವ ಶ್ರೀರಾಮುಲು ಅವರ ಮಗಳ ಮದುವೆಯೇ ಸಾಕ್ಷಿ’ ಎಂದುಮಾಜಿ ಶಾಸಕ ಎಚ್‌. ವಿಶ್ವನಾಥ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಸಚಿವರು ಹಾಗೂ ಐಎಎಸ್ ಅಧಿಕಾರಿಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನ ಮದುವೆಗೆ ಸಿದ್ಧತೆ ನಡೆದಿದೆ. ಅದಕ್ಕಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕುತ್ತಿದ್ದಾರೆ. ನಿಖಿಲ್ ಅವರ ನಿಶ್ಚಿತಾರ್ಥಕ್ಕೆ ವಿದೇಶದಿಂದ ಹಾರ ತರಿಸಲಾಗಿದೆ. ನಮ್ಮ ರಾಜ್ಯದಲ್ಲೇ ವಿವಿಧ ಬಗೆಯ ಹೂವುಗಳಿವೆ. ಆದರೆ, ನಿಖಿಲ್ ಅವರಿಗೆ ವಿದೇಶದ ಹಾರವೇ ಬೇಕಿತ್ತಾ?’ ಎಂದು ಪ್ರಶ್ನಿಸಿದರು.

‘ಜನರ ಋಣ ತೀರಿಸಲು ಮಗನ ಮದುವೆ ಸಂದರ್ಭದಲ್ಲಿ ಜನರಿಗೆ ಸೀರೆ ಇತ್ಯಾದಿ ಕೊಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅವರು ಮುಖ್ಯಮಂತ್ರಿ ಇದ್ದಾಗಲೇ ಜನರ ಋಣ ತೀರಿಸುವ ಕೆಲಸ ಮಾಡಬಹುದಿತ್ತು. ಇಂತಹ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

‘ದೆಹಲಿ ಮುಖ್ಯಮಂತ್ರಿ ತಮ್ಮ ರಾಜ್ಯದ ಜನತೆಗೆ ವಿದ್ಯುತ್, ನೀರು ಹಾಗೂ ಸಾರಿಗೆ ಉಚಿತವಾಗಿ ನೀಡಿದ್ದಾರೆ. ಇಂಥ ಕೆಲಸಗಳತ್ತ ನಮ್ಮ ರಾಜ್ಯ ಸರ್ಕಾರವು ಗಮನಹರಿಸಬೇಕು.ರಾಜ್ಯದ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ನಮ್ಮ ರಾಜ್ಯದ ಬಜೆಟ್ ವಿಶ್ಲೇಷಿಸಬೇಕಿದೆ. ರಾಜ್ಯ ಸರ್ಕಾರ ₹2.5 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ₹1.5 ಲಕ್ಷ ಕೋಟಿ ಸಾಲವಿದೆ. ಈ ಸಾಲಕ್ಕೆ ಬಡ್ಡಿ ಕಟ್ಟಲು ಸಾಧ್ಯವೇ? ಒಂದೆಡೆ ಸಾಲದ ತೂಕ ಜಾಸ್ತಿ ಆಗುತ್ತಿದ್ದರೆ, ಇನ್ನೊಂದೆಡೆ ಬಜೆಟ್ ತೂಕವೂ ಜಾಸ್ತಿ ಆಗಿದೆ’ ಎಂದರು.

‘ರಾಜ್ಯದ ಜಿಎಸ್‌ಟಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲೇ ಹೇಳಿದ್ದಾರೆ. ಈ ಬಗ್ಗೆ ರಾಜ್ಯದ ಸಂಸದರು ಬಾಯಿ ಬಿಡಬೇಕು. ಕೇಂದ್ರದ ಮೇಲೆ ಒತ್ತಡ ಹಾಕಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು. ರಾಜ್ಯದ 28 ಸಂಸದರಿಗೆ ಯಾವ ಭಯ ಕಾಡುತ್ತಿದೆಯೋ ಗೊತ್ತಿಲ್ಲ’ ಎಂದರು.

‘ನಾವು ಪಕ್ಷಾಂತರ ಮಾಡಿದ್ದು ಒಂದು ಹೋರಾಟ. ಆ ಹೋರಾಟವನ್ನು ಕೆಲವರು ಮಾರಾಟ ಎಂದರು. ರಾಜ್ಯದಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿ ಬಹಳ ದಿನವಾಗಿದೆ. ನಾನು ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಿದವನಲ್ಲ. ನನಗೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು’ ಎಂದು ಪ‍್ರಶ್ನೆಯೊಂದಕ್ಕೆ ವಿಶ್ವನಾಥ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.