
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ಸುವರ್ಣ ವಿಧಾನಸೌಧ (ಬೆಳಗಾವಿ): ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳವು ಪ್ರಕರಣವು ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿತು.
ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಬಿ.ಆರ್. ಪಾಟೀಲ, ‘ನನಗೆ ವಿಧಾನಸಭೆಗೆ ಬರಲು ಅಡ್ಡಿ ಮಾಡುವ ಪ್ರಯತ್ನ ನಡೆದಿತ್ತು. ಆ ಪ್ರಯತ್ನ ಈಗ ಬಯಲಾಗಿದೆ. ಮತ ಕಳವು ನಡೆಸಿರುವುದು ಬಹಿರಂಗವಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಅದಕ್ಕೆ ವಿರೋಧ ಪಕ್ಷದ ಸದಸ್ಯರು ಗಟ್ಟಿ ಧ್ವನಿಯಿಂದ ಆಕ್ಷೇಪ ವ್ಯಕ್ತಪಡಿಸಿದರು. ‘ಮತ ಕಳವು ಪದ್ಧತಿ ಶುರು ಮಾಡಿದ್ದೇ ಕಾಂಗ್ರೆಸ್. ಈ ವಿಚಾರವಾಗಿ ಎಸ್ಐಟಿ ಮಧ್ಯಂತರ ವರದಿ ಸಲ್ಲಿಸಿದ ನಂತರ ಚರ್ಚೆ ಮಾಡೋಣ’ ಎಂದು ಬಿಜೆಪಿಯ ವಿ. ಸುನಿಲ್ ಕುಮಾರ್ ಮತ್ತಿತರರು ಆಡಳಿತ ಪಕ್ಷದ ಸದಸ್ಯರ ಮೇಲೆ ಮುಗಿಬಿದ್ದರು.
ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದಾಗ, ‘ಈ ವಿಷಯ ಕಾರ್ಯಸೂಚಿಯಲ್ಲಿ ಇಲ್ಲ. ಹೀಗಾಗಿ, ಈಗ ಚರ್ಚೆ ಬೇಡ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಸಮಾಧಾನಪಡಿಸಲು ಯತ್ನಿಸಿದರು.
ಬಿ.ಆರ್. ಪಾಟೀಲ ಅವರ ಆಗ್ರಹಕ್ಕೆ ದನಿಗೂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಒಂದು ಮತಕ್ಕೆ ₹80ಕ್ಕೆ ವೆಚ್ಚ ಮಾಡಿ ಕಳವು ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯೇ ಹರಾಜು ಆಗುತ್ತಿದೆ. ಸಂವಿಧಾನವನ್ನು ಕೊಲೆ ಮಾಡುತ್ತಿದ್ದಾರೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಿ’ ಎಂದು ಮನವಿ ಮಾಡಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರವೇ ನಡೆಯಿತು.
ಈ ಮಧ್ಯೆ, ‘ಗೃಹಲಕ್ಷ್ಮೀ’ ಯೋಜನೆಯ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ‘ಗೃಹಲಕ್ಷ್ಮೀ’ ಹಣ ನೀಡಲಾಗಿದೆ ಎಂದು ಹೇಳುವ ಮೂಲಕ ಸಚಿವರು ಸಸನಕ್ಕೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಪಟ್ಟು ಹಿಡಿದರು.
ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ‘ಸಚಿವರ ಜೊತೆ ಮಾತನಾಡಿ ಸ್ಪಷ್ಟನೆ ಕೊಡಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.