ADVERTISEMENT

ಒಂದು ಮತಕಳವಿಗೆ ₹80 ‘ಕೂಲಿ’: ಕೋಳಿ ಫಾರ್ಮ್‌ ಕಾರ್ಮಿಕರ ಮೊಬೈಲ್ ನಂಬರ್ ದುರ್ಬಳಕೆ

ಜಯಸಿಂಹ ಆರ್.
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
   

ಬೆಂಗಳೂರು: ‘ಒಬ್ಬ ಮತದಾರನ ಚೀಟಿಯನ್ನು ಅಕ್ರಮವಾಗಿ ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದಕ್ಕೆ ₹80. ಎರಡು ಅರ್ಜಿಗಳಿಗೆ ₹160...’

ಕಾಂಗ್ರೆಸ್‌ನ ಬಿ.ಆರ್. ಪಾಟೀಲ ಅವರು ಪ್ರತಿನಿಧಿಸುತ್ತಿರುವ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ದ ಬೆನ್ನು ಹತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪತ್ತೆ ಮಾಡಿದ ಅಕ್ರಮದ ಜಾಡು ಇದು.

‘2023ರ ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ, ಈ ಕ್ಷೇತ್ರದಲ್ಲಿ ಒಟ್ಟು 6,000ಕ್ಕೂ ಹೆಚ್ಚು ಮತದಾರರ ಚೀಟಿಗಳನ್ನು ಅಕ್ರಮವಾಗಿ ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದವರಿಗೆ ₹4.80 ಲಕ್ಷ ಕೂಲಿ ನೀಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.

ADVERTISEMENT

‘ಮೊಹಮ್ಮದ್‌ ಅಶ್ಫಾಕ್ ಮತ್ತು ಅಕ್ರಂ ಎಂಬುವವರು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ಸೈಬರ್‌ ಸೆಂಟರ್‌ ಒಂದರಲ್ಲಿ ಜುನೇದ್‌, ಅಸ್ಲಂ, ನದೀಂ ಅವರು ಕೆಲಸ ಮಾಡುತ್ತಿದ್ದರು. 2022ರ ಡಿಸೆಂಬರ್‌ನಿಂದ 2023ರ ಫೆಬ್ರುವರಿವರೆಗೆ ಹಗಲೂ–ರಾತ್ರಿ ಸೈಬರ್‌ ಸೆಂಟರ್‌ನಲ್ಲಿಯೇ ಉಳಿದು ಈ ಮೂವರೂ ಅಕ್ರಮವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

‘ಈ ಸೈಬರ್‌ ಸೆಂಟರ್‌ನಲ್ಲಿ ಆಧಾರ್‌ ತಿದ್ದುಪಡಿ, ಬಿಪಿಎಲ್‌ ತಿದ್ದುಪಡಿ, ಜಾತಿ–ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ಕೆಲಸ ಮಾಡಲಾಗುತ್ತಿತ್ತು. ಹೀಗೆ ಅರ್ಜಿ ಸಲ್ಲಿಸಲು ಬಂದಿದ್ದವರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು 100 ಹೊಸ ಸಿಮ್‌ ಕಾರ್ಡ್‌ಗಳನ್ನು ಖರೀದಿಸಲಾಗಿದೆ. ಜತೆಗೆ ಕಲಬುರಗಿ ಸುತ್ತಮುತ್ತಲ ಇರುವ ಕೋಳಿ ಫಾರ್ಮ್‌ಗಳಲ್ಲಿ ದುಡಿಯುವ 75 ಕೂಲಿ ಕಾರ್ಮಿಕರ ಮೊಬೈಲ್‌ ನಂಬರ್‌ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

‘ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಒಂದು ವಿಧಾನಸಭಾ ಕ್ಷೇತ್ರದ ಮತದಾರನ ಚೀಟಿಯನ್ನು ರದ್ದುಪಡಿಸಲು ಅರ್ಜಿ ಸಲ್ಲಿಸುವವರು ಅದೇ ಕ್ಷೇತ್ರದ ಮತದಾರರು ಆಗಿರಬೇಕು. ಆಳಂದ ಕ್ಷೇತ್ರದ ವಿವಿಧ ಮತಗಟ್ಟೆಗಳ ಮತದಾರರ ಪಟ್ಟಿಯನ್ನು ಇರಿಸಿಕೊಂಡಿದ್ದ ಆರೋಪಿಗಳು, ಆ ಪೈಕಿ ಕೆಲ ಮಂದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮತದಾರರ ಎಪಿಕ್‌ ಸಂಖ್ಯೆ ಮತ್ತು ಹೊಸ ಸಿಮ್ ಕಾರ್ಡ್‌ಗಳ ಮೂಲಕ ನಕಲಿ ‘ಬಳಕೆದಾರರ ಖಾತೆ’ ಸೃಷ್ಟಿಸಿದ್ದಾರೆ.

‘ಈ ಖಾತೆಗಳನ್ನು ಬಳಸಿಕೊಂಡು ಮತದಾರರ ಚೀಟಿಗಳನ್ನು ರದ್ದುಪಡಿಸಲು ಫಾರಂ–7 ಅನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಸಲ್ಲಿಸುವ ವೇಳೆ, ಅರ್ಜಿದಾರರ ಪರಿಚಯಸ್ಥರ ಮೊಬೈಲ್‌ ಸಂಖ್ಯೆ ನಮೂದಿಸುವುದು ಕಡ್ಡಾಯ. ಆ ಜಾಗದಲ್ಲಿ ಕೋಳಿ ಫಾರ್ಮ್‌ನ ಕೂಲಿ ಕಾರ್ಮಿಕರ ನಂಬರ್‌ಗಳನ್ನು ಹಾಕಿದ್ದಾರೆ. ಹೀಗೆ ಎಪಿಕ್‌ ಸಂಖ್ಯೆ, ಹೊಸ ಸಿಮ್‌ ಕಾರ್ಡ್‌ಗಳ ನಂಬರ್ ಮತ್ತು ಕೋಳಿ ಫಾರ್ಮ್‌ ಕೂಲಿಕಾರ್ಮಿಕರ ಮೊಬೈಲ್‌ ನಂಬರ್‌ಗಳನ್ನು ಸಂಯೋಜಿಸಿ ಸಾವಿರಕ್ಕೂ ಹೆಚ್ಚು ‘ಬಳಕೆದಾರರ ಖಾತೆ’ಗಳನ್ನು ಸೃಷ್ಟಿಸಿದ್ದಾರೆ.

‘2023ರ ಫೆಬ್ರುವರಿಯಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ನಂತರ, ಪೊಲೀಸರು ಮೊಹಮ್ಮದ್ ಅಶ್ಫಾಕ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಆತ ದುಬೈಗೆ ಪರಾರಿಯಾಗಿದ್ದಾನೆ. ಆನಂತರದಲ್ಲಿ ಸೈಬರ್‌ ಸೆಂಟರ್‌ಗೆ ಬಾಗಿಲು ಹಾಕಲಾಗಿತ್ತು.

‘ಸ್ಥಳೀಯ ಪೊಲೀಸರು ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಮೊಹಮ್ಮದ್‌ ಅಶ್ಫಾಕ್ ಮತ್ತು ಸೈಬರ್‌ ಸೆಂಟರ್‌ನಲ್ಲಿ ಕೆಲಸ ಮಾಡಿದ್ದವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿತ್ತು. ಈ ವೇಳೆ ದೊಡ್ಡ ಪ್ರಮಾಣದ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಈ ಎಲ್ಲರ ಮನೆ ಮೇಲೆ ದಾಳಿ ನಡೆಸಿ, ಪರಿಶೀಲಿಸಿದ ಮತ್ತು ವಿಚಾರಣೆಯ ನಂತರ ಅಕ್ರಮವಾಗಿ ಅರ್ಜಿ ಸಲ್ಲಿಸಿದ್ದಕ್ಕೇ ಈ ಹಣ ಪಾವತಿ ಮಾಡಲಾಗಿದೆ ಎಂಬುದು ಗೊತ್ತಾಯಿತು.

‘ಮೊಹಮ್ಮದ್ ಅಶ್ಫಾಕ್ ಮತ್ತು ಅಕ್ರಂ ಅವರು ಆ ಮೂರು ತಿಂಗಳ ಅವಧಿಯಲ್ಲಿ, ಇತರ ಮೂವರಿಗೂ ನಿಯಮಿತವಾಗಿ ದೊಡ್ಡ ಮೊತ್ತದ ಹಣ ಪಾವತಿ ಮಾಡಿದ್ದಾರೆ. ಈ ಅಕ್ರಮ ಎಸಗಲು ಮೊಹಮ್ಮದ್ ಅಶ್ಫಾಕ್ ಮತ್ತು ಅಕ್ರಂ ಅವರಿಗೆ ಚಾರ್ಟರ್ಡ್‌ ಅಕೌಂಟೆಂಟ್‌ ಒಬ್ಬರ ಮೂಲಕ ಹಣ ಪಾವತಿಯಾಗಿದೆ. ಚಾರ್ಟರ್ಡ್‌ ಅಕೌಂಟೆಂಟ್‌ಗೆ ಕಲಬುರಗಿಯ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ ಉದ್ಯೋಗಿ ಒಬ್ಬರ ಖಾತೆ ಮೂಲಕ ಹಣ ನೀಡಲಾಗಿದೆ. ಬಾರ್‌ ಉದ್ಯೋಗಿಯ ಖಾತೆಗೆ ಹಣ ಜಮೆ ಮಾಡಿದವರು ಯಾರು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಆಳಂದ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ಮನೆ, ಕಚೇರಿ ಮತ್ತು ಅವರ ಒಡೆತನದ ಸಪ್ನಾ ಬಾರ್ ಆ್ಯಂಡ್‌ ರೆಸ್ಟೋರೆಂಟ್‌ ಮೇಲೆ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದರು. ಕಲಬುರಗಿ ನಗರದ ಇಬ್ಬರು ಚಾರ್ಟರ್ಡ್‌ ಅಕೌಂಟೆಂಟ್‌ ಮನೆ–ಕಚೇರಿಗಳಲ್ಲೂ ಶೋಧ ನಡೆಸಿದ್ದರು. ಇದೇ ವೇಳೆ ಗುತ್ತೇದಾರ ಅವರ ಆಳಂದದ ಮನೆ ಎದುರು ರಾಶಿ–ರಾಶಿ ದಾಖಲೆ ಪತ್ರಗಳಿಗೆ ಬೆಂಕಿ ಹಾಕಲಾಗಿತ್ತು.

ಆರು ಮಂದಿ ಬಂಧನಕ್ಕೆ ತಯಾರಿ

30 ವ್ಯಕ್ತಿಗಳ ವಿಚಾರಣೆ ನಡೆಸಿರುವ ಎಸ್‌ಐಟಿ ಆರು ಮಂದಿಯ ಬಂಧನಕ್ಕೆ ಸಿದ್ಧತೆ ನಡೆಸಿದೆ.

  • ಅಕ್ರಮವಾಗಿ ಅರ್ಜಿ ಸಲ್ಲಿಸಿದ್ದವರಿಗೆ ದೊಡ್ಡಮೊತ್ತದ ಹಣ ನೀಡಿದ್ದ ಸೈಬರ್‌ ಸೆಂಟರ್‌ ಮಾಲೀಕ ಅಶ್ಫಾಕ್

  • ಅಫ್ಷಾಕ್‌ಗೆ ಚಾರ್ಟರ್ಡ್‌ ಅಕೌಂಟೆಂಟ್‌ (ಸಿ.ಎ) ಒಬ್ಬರಿಂದ ಹಣ ರವಾನೆ. ಸಿ.ಎಗೆ ಬಾರ್‌ ಉದ್ಯೋಗಿಯಿಂದ ಹಣ

  • ಕಲಬುರಗಿಯ ಇಬ್ಬರು ಸಿ.ಎಗಳ ಮನೆ, ಸುಭಾಷ ಗುತ್ತೇದಾರ ಅವರ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಶೋಧ ನಡೆಸಿದ್ದ ಎಸ್‌ಐಟಿ

  • ಚುನಾವಣಾ ಆಯೋಗದ ಪೋರ್ಟಲ್‌ಗೆ ಲಾಗಿನ್ ಆಗಲು ಸಾವಿರಕ್ಕೂ ಹೆಚ್ಚು ನಕಲಿ ‘ಬಳಕೆದಾರರ ಖಾತೆ’ ಸೃಷ್ಟಿ

  • ಅರ್ಜಿಗಳನ್ನು ಸಲ್ಲಿಸಲು ‘ಬಲ್ಕ್‌ ಅಪ್‌ಲೋಡ್‌’ ತಂತ್ರಾಂಶ ಬಳಸಲಾಗಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ

  • ಸುಭಾಷ ಗುತ್ತೇದಾರ ಅವರ ಮನೆಯಲ್ಲಿ ಪತ್ತೆಯಾದ ಅರೆಬರೆ ಸುಟ್ಟ ಮತದಾರರ ಅರ್ಜಿಗಳು, ಸೈಬರ್‌ ಸೆಂಟರ್‌ನಿಂದ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಸ್ಪರ ಹೋಲಿಸಿ ತನಿಖೆ

12 ಸಾವಿರಕ್ಕೂ ಹೆಚ್ಚು ಚೀಟಿ ರದ್ದತಿಗೆ ಯತ್ನ
ಆರೋಪಿಗಳು ತಾವು ಸೃಷ್ಟಿಸಿದ್ದ ಬಳಕೆದಾರರ ನಕಲಿ ಖಾತೆಗಳ ಮೂಲಕ ಅಕ್ರಮವಾಗಿ 12,000ಕ್ಕೂ ಹೆಚ್ಚು ಮತದಾರರ ಚೀಟಿಗಳನ್ನು ರದ್ದುಪಡಿಸಲು ಅರ್ಜಿ ಸಲ್ಲಿಸಲು ಯತ್ನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ ಒಂದು ‘ಬಳಕೆದಾರರ ಖಾತೆ’ ಮೂಲಕ ಗರಿಷ್ಠ ಆರು ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ಹೀಗಾಗಿ ಸುಮಾರು 6,000 ಅರ್ಜಿಗಳು ಸಲ್ಲಿಕೆಯ ವೇಳೆಯೇ ತಿರಸ್ಕೃತವಾಗಿವೆ. 6,018 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದೂ ಎಸ್ಐಟಿ ಮೂಲಗಳು ಹೇಳಿವೆ.

ಲಾಗಿನ್‌ ಬಿಗಿಗೊಳಿಸಿದ ಆಯೋಗ

ಮತದಾರರ ಚೀಟಿ ರದ್ದುಪಡಿಸುವ ಅಥವಾ ಸೇರಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗದ ಪೋರ್ಟಲ್‌ಗೆ ಲಾಗಿನ್‌ ಆಗುವ ವಿಧಾನವನ್ನು, ಆಯೋಗವು ಬಿಗಿಗೊಳಿಸಿದೆ.

ಈ ಮೊದಲು ಎಪಿಕ್‌ ಸಂಖ್ಯೆ (ಮತದಾರರ ಚೀಟಿ ಸಂಖ್ಯೆ), ಯಾವುದಾದರೂ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ಈ ಪೋರ್ಟಲ್‌ಗೆ ಲಾಗಿನ್‌ ಆಗಬಹುದಾಗಿತ್ತು. ಎಪಿಕ್ ಒಬ್ಬರದು, ಮೊಬೈಲ್‌ ಇನ್ಯಾರದ್ದೋ ಆಗಿದ್ದರೂ ಲಾಗಿನ್ ಆಗಬಹುದಾಗಿತ್ತು. ಆಳಂದ ಕ್ಷೇತ್ರದ ಪ್ರಕರಣದಲ್ಲಿ ಹೀಗೆಯೇ ಬೇರೆ–ಬೇರೆಯವರ ವಿವರಗಳನ್ನು ಬಳಸಿಕೊಂಡು ಲಾಗಿನ್‌ ಆಗಲಾಗಿತ್ತು.

ಆದರೆ ಈಗ ಎಪಿಕ್‌ ಯಾರದ್ದೋ, ಅವರ ಆಧಾರ್ ಜತೆಗೆ ಜೋಡಿಸಿರುವ ಮೊಬೈಲ್‌ ಸಂಖ್ಯೆ ಇದ್ದರಷ್ಟೇ ಲಾಗಿನ್‌ ಸಾಧ್ಯವಾಗುವಂತೆ ಚುನಾವಣಾ ಆಯೋಗವು ಬದಲಾವಣೆ ಮಾಡಿದೆ. ಜತೆಗೆ ಒಂದು ಲಾಗಿನ್‌ನಿಂದ ಹಲವು ಅರ್ಜಿಗಳನ್ನು ಸಲ್ಲಿಸಲು ಇದ್ದ ಅವಕಾಶವನ್ನು ಮಿತಿಗೊಳಿಸಿದೆ.

ಆಳಂದ ಕ್ಷೇತ್ರದಲ್ಲಿ ಅಕ್ರಮವಾಗಿ 6,000ಕ್ಕೂ ಹೆಚ್ಚು ಮತದಾರರ ಚೀಟಿಗಳನ್ನು ರದ್ದುಪಡಿಸಲು ಯತ್ನಿಸಲಾಗಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್‌ 18ರಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಮತಕಳವು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರವು ಸೆಪ್ಟೆಂಬರ್ 20ರಂದು ಆದೇಶಿಸಿತ್ತು. ಸೆಪ್ಟೆಂಬರ್ 24ರಂದು ಆಯೋಗವು ಈ ಬದಲಾವಣೆಗಳನ್ನು ಜಾರಿಗೆ ತಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.