
ಬೆಂಗಳೂರು: ‘ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಮತ ಕಳವು ನಡೆಸುತ್ತಿವೆ’ ಎಂದು ಆರೋಪಿಸಿ ಯುವ ಕಾಂಗ್ರೆಸ್ ಸಮಿತಿಯು (ಕೆಪಿವೈಸಿಸಿ) ಫ್ರೀಡಂ ಪಾರ್ಕ್‌ನಲ್ಲಿ ಇದೇ 15ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗವು, ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಕೀಲುಗೊಂಬೆಯಂತೆ ಮತ ಕಳವಿಗೆ ಸಹಕಾರ ನೀಡುತ್ತಿದೆ. ಇದರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ನೇತೃತ್ವವನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಉಸ್ತುವಾರಿ ಮನೀಶ್ ಶರ್ಮಾ ವಹಿಸಲಿದ್ದಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದರು.
‘ಪ್ರತಿಭಟನೆ ನಡೆಸಿದ ಬಳಿಕ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು. ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.