ADVERTISEMENT

ವಿಟಿಯು ಕುಲಸಚಿವರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 19:00 IST
Last Updated 17 ನವೆಂಬರ್ 2018, 19:00 IST

ಬೆಂಗಳೂರು: ‘ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಎಚ್‌.ಎನ್.ಜಗನ್ನಾಥ್ ರೆಡ್ಡಿ ಅವರು ಸಹಾಯಕ ಪ್ರಾಧ್ಯಾಪಕ ಎ.ಯೋಗಾನಂದ್ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ’ ಎಂದು ಆರೋಪಿಸಿ ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಎಚ್‌.ಎ.ವೆಂಕಟೇಶ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಶುಕ್ರವಾರ ದೂರು ಕೊಟ್ಟಿದ್ದಾರೆ.

‘ವಿ.ವಿಯ ಪ್ರಯೋಗಾಲಯಕ್ಕೆ ಉಪಕರಣ ಖರೀದಿಸುವ ವೇಳೆ ಯೋಗಾನಂದ್ ಅವ್ಯವಹಾರ ನಡೆಸಿರುವುದಾಗಿ ಕುಲಸಚಿವರು ಆರೋಪಿಸಿದ್ದಾರೆ. ಈ ಅಕ್ರಮದ ಬಗ್ಗೆ ನ್ಯಾಯಸಮ್ಮತವಾಗಿ ವಿಚಾರಣೆ ನಡೆಸಿ, ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳ
ಬೇಕು. ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯ ದೃಷ್ಟಿಯಿಂದ ಈ ಕೆಲಸ ಜರೂರಾಗಿ ಆಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಯೋಗಾನಂದ್ ಪರಿಶ್ರಮದ ಮೂಲಕ ಮೇಲೆ ಬಂದವರು. ಬಿ.ಇ, ಎಂ.ಟೆಕ್ ಪದವಿಗಳ ಜತೆಗೆ ತಾಂತ್ರಿಕ ವಿಭಾಗದಿಂದ ಪಿಎಚ್‌.ಡಿ ಪಡೆದಿದ್ದಾರೆ. ಯಾವುದೋ ದ್ವೇಷದಿಂದ ಅವರನ್ನು ಕಾನೂನಿನ ಬಲೆಗೆ ಸಿಕ್ಕಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಈ ಪ್ರಕರಣ ಸಂಬಂಧ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಯುತ್ತಿತ್ತು. ಅದು ಪೂರ್ಣಗೊಳ್ಳುವ ಮೊದಲೇ ಯೋಗಾನಂದ್ ಅವರನ್ನು ಅಮಾನತು ಮಾಡಲಾಯಿತು. ವಿಚಾರಣೆ ವರದಿ ಕೈಸೇರುವ ಮುನ್ನವೇ ಸಿಇಎನ್ ಠಾಣೆಗೂ ದೂರು ಕೊಡಲಾಯಿತು. ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದ ಪೊಲೀಸರು, ಅವರು ಠಾಣೆಗೆ ಹೋಗುತ್ತಿದ್ದಂತೆಯೇ ಬಂಧಿಸಿದರು. ಹೀಗಾಗಿ, ಈ ಪ್ರಕರಣದಲ್ಲಿ ತಾವು ಕೂಡಲೇ ಮಧ್ಯಪ್ರವೇಶ ಮಾಡಬೇಕಿದೆ. ಕುಲಸಚಿವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ಶೈಕ್ಷಣಿಕ ಉನ್ನತಿಗೆ ಕಳಂಕ ತೊಳೆಯಬೇಕಿದೆ’ಎಂದು ಮನವಿ ಮಾಡಿದ್ದಾರೆ.

‘ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾದ ಜಗನ್ನಾಥ್, ಎರವಲು ಸೇವೆ ಮೇಲೆ ಕುಲಸಚಿವರಾಗಿ ಬಂದಿದ್ದಾರೆ. ಹೀಗಾಗಿ, ಅವರಿಗೆ ಸೇವಾ ನಿಯಮಗಳ ಅರಿವಿಲ್ಲ. ಇನ್ನುಮುಂದೆ ಯಾರನ್ನಾದರೂ ಎರವಲು ಸೇವೆಗೆ ನಿಯೋಜಿಸುವಾಗ ಸೂಕ್ತ ನಿಯಮಾವಳಿಗಳನ್ನು ಜಾರಿಗೊಳಿಸುವುದು ಅವಶ್ಯಕವೆಂಬುದು ಈ ಪ್ರಕರಣದಿಂದ ಸಾಬೀತಾಗಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.