ADVERTISEMENT

ವಿಟಿಯು: ಕಳಂಕಿತ ವ್ಯಕ್ತಿ ಸೆನೆಟ್ ಸದಸ್ಯರಾಗಿ ನೇಮಕ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
   

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕಾರ್ಯನಿರ್ವಾಹಕ ಮಂಡಳಿಯಿಂದ ತೆಗೆದು ಹಾಕಲಾಗಿದ್ದ ಕೆಜೆಎಫ್‌ನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ಪ್ರಾಚಾರ್ಯರನ್ನು ಅದೇ ವಿಶ್ವವಿದ್ಯಾಲಯದ ಶೈಕ್ಷಣಿಕ ಸೆನೆಟ್‌ಗೆ ನೇಮಕ ಮಾಡಲಾಗಿದೆ.

ವಿಶೇಷವೆಂದರೆ ಕಿತ್ತು ಹಾಕಿದವರೂ ಕುಲಾಧಿಪತಿ ವಜುಭಾಯಿ ವಾಲಾ, ಇದೀಗ ನೇಮಕಾತಿ ಮಾಡಿದವರೂ ಅವರೇ.

ವಿಟಿಯುನ ನೂತನ ಸೆನೆಟ್‌ ರಚನೆಗೆ ವಜುಭಾಯಿ ವಾಲಾ ಅವರು ಜೂನ್‌ 15ರಂದು ಒಪ್ಪಿಗೆ ಸೂಚಿಸಿದ್ದಾರೆ. 2016ರ ಜೂನ್‌ 18ರಂದು ಈ ಕಳಂಕಿತ ವ್ಯಕ್ತಿ ಸಹಿತ ಆರು ಮಂದಿಯನ್ನು ಕಾರ್ಯನಿರ್ವಾಹಕ ಮಂಡಳಿಯಿಂದ ಕಿತ್ತು ಹಾಕಲಾಗಿತ್ತು. ಅವರೆಲ್ಲರೂ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡವರಾಗಿದ್ದರು.

ADVERTISEMENT

‘ಈ ಸದಸ್ಯರ ಕಾರ್ಯ ನಿರ್ವಹಣೆ ಬಗ್ಗೆ ಹಲವಾರು ದೂರುಗಳು ಬಂದಿವೆ. ಇವರ ವಿರುದ್ಧ ವಿಚಾರಣಾ ಸಮಿತಿಯನ್ನೂ ರಚಿಸಲಾಗಿದೆ’ ಎಂಬ ಕಾರಣ ನೀಡಿ ಅಂದು ಕ್ರಮ ಕೈಗೊಳ್ಳಲಾಗಿತ್ತು.

ಇದೀಗ ಆ ಆರು ಮಂದಿ ಸದಸ್ಯರ ಪೈಕಿ ಒಬ್ಬರನ್ನು ಸೆನೆಟ್‌ಗೆ ಸೇರಿಸಿಕೊಳ್ಳಲಾಗಿದೆ. ಇದಕ್ಕೆ ಹಾಲಿ ಕುಲಪತಿ ಅವರ ಶಿಫಾರಸೇ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ರಾಜಭವನ ಮತ್ತು ಕುಲಪತಿ ಅವರಿಂದ ಮಾಹಿತಿ ಪಡೆಯುವ ಯತ್ನಕ್ಕೆ ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.