ADVERTISEMENT

‘ಕಾಡು ಪ್ರಾಣಿಗಳ ಹಾವಳಿ ತಡೆಗೆ ತಡೆಗೋಡೆ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 20:14 IST
Last Updated 6 ಜನವರಿ 2021, 20:14 IST
ಆನಂದ್ ಸಿಂಗ್
ಆನಂದ್ ಸಿಂಗ್   

ಬೆಂಗಳೂರು: ಕಾಡು ಪ್ರಾಣಿಗಳ ಹಾವಳಿ ತಡೆಯಲು ಅರಣ್ಯ ಪ್ರದೇಶದ ಅಂಚಿನಲ್ಲಿ ತಡೆಗೋಡೆ ಮತ್ತು ಹೊಂಡಗಳನ್ನು ನಿರ್ಮಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್‌ ಸಿಂಗ್ ತಿಳಿಸಿದರು.

ವಿಕಾಸಸೌಧದಲ್ಲಿ ‘ಕೊಡಗು ಮಾನವ– ವನ್ಯಜೀವಿ ಸಂಘರ್ಷ ಉಪಶಮನ ಪ್ರತಿಷ್ಠಾನ’ ಆಡಳಿತ ಮಂಡಳಿಯ ಸಭೆ ನಡೆಸಿ ಮಾತನಾಡಿದರು.

‘ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೆಳೆ ಹಾನಿಯಾಗಿದ್ದು, ಕೃಷಿಕರಿಗೆ ಸಮಸ್ಯೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟುನ ನಿಟ್ಟಿನಲ್ಲಿ ಕಾಡು ಪ್ರಾಣಿಗಳು ತೋಟಗಳಿಗೆ ನುಗ್ಗದಂತೆ ಅರಣ್ಯ ಪ್ರದೇಶದ ಅಂಚಿನಲ್ಲಿ ತಡೆಗೋಡೆ ಹಾಗೂ ಹೊಂಡಗಳನ್ನು ನಿರ್ಮಿಸಲಾಗುವುದು’ ಎಂದು ಹೇಳಿದರು.

ADVERTISEMENT

ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಹೆಚ್ಚಾಗಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ. ಈ ಭಾಗಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿ ಇಡುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿ ಕಾರ್ಯಗಳು ಸುಸ್ಥಿರವಾಗಿರಬೇಕು. ಪ್ರವಾಸಿ ತಾಣಗಳಲ್ಲಿ ಸೇತುವೆಗಳ
ಅಭಿವೃದ್ಧಿಯಾಗಬೇಕು. ಮರದ ಅಥವಾ ಕಬ್ಬಿಣದ ಸೇತುವೆಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಕಾರಣಕ್ಕೆ ಕಾಂಕ್ರೀಟ್‌ ಸೇತುವೆಗಳನ್ನು ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಣಿಗಳ ಸೆರೆಗೆ ಫೈಬರ್ ಗೇಜ್, ನೆಟ್ ಬಳಕೆ: ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವಾಗ ಅವುಗಳಿಗೆ ಗಾಯಗಳಾಗದಂತೆ ಫೈಬರ್ ಗೇಜ್ ಹಾಗೂ ನೆಟ್‌ಗಳನ್ನು ಬಳಸಬೇಕು. ಆಕಸ್ಮಿಕವಾಗಿ ಗಾಯಗಳಾದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವುಗಳನ್ನು ರಕ್ಷಣೆ ಮಾಡುವಂತೆಯೂ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಗೋಗಿ, ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಜಯ್ ಮೋಹನ್, ಉಪ ಸಂರಕ್ಷಣಾ ಅಧಿಕಾರಿ ಪ್ರಭಾಕರನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.