ADVERTISEMENT

ವಕ್ಫ್‌ ಮಂಡಳಿ ಸರ್ಕಾರಕ್ಕಿಂತ ದೊಡ್ಡದಲ್ಲ: ಜಮೀರ್‌ಗೆ ಸಚಿವ ಸಿ.ಟಿ.ರವಿ ಟಾಂಗ್ 

​ಪ್ರಜಾವಾಣಿ ವಾರ್ತೆ
Published 20 ಮೇ 2020, 10:58 IST
Last Updated 20 ಮೇ 2020, 10:58 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ವಕ್ಫ್‌ ಬೋರ್ಡ್‌ ಹಣ ಸರ್ಕಾರ ತೆಗೆದುಕೊಳ್ಳಬಾರದು ಎಂಬ ಹೇಳಿಕೆ ಸಂವಿಧಾನ ವಿರೋಧಿ ಮತ್ತು ತಥಾಕಥಿತ ಜಾತ್ಯತೀತ ನೀತಿಗೆ ವಿರುದ್ಧವಾದುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಕುಟುಕಿದರು.

ವಕ್ಫ್‌ ಬೋರ್ಡ್‌ ಹಣ ಸರ್ಕಾರ ತೆಗೆದುಕೊಳ್ಳಬಾರದು ಎಂಬ ಜಮೀರ್ ಅವರ ಹೇಳಿಕೆಯನ್ನು ರವಿ ಬುಧವಾರ ಸುದ್ದಿಗೋಷ್ಠಿಯಲ್ಲಿಕಟುವಾಗಿ ಟೀಕಿಸಿ, ವಕ್ಫ್‌ ಬೋರ್ಡ್‌ ಸರ್ಕಾರಕ್ಕಿಂತ ದೊಡ್ಡದಲ್ಲ ಎಂದರು.

ಜಾತಿ–ಧರ್ಮಗಳ ಮಧ್ಯೆ ತಾರತಮ್ಯ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಜಮೀರ್‌ ಹೇಳಿಕೆ ಜಾತ್ಯತೀತ ತತ್ವಕ್ಕೆ ವಿರುದ್ಧವಾದುದು. ಮಾನವೀಯತೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಅದು ಜಮೀರ್‌ ಹೇಳಿಕೆಯೋ ಅಥವಾ ಕಾಂಗ್ರೆಸ್‌ ಪಕ್ಷದ ಹೇಳಿಕೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಧರ್ಮದ ವಿಚಾರ ಬಂದಾಗ ಬೊಬ್ಬೆ ಹೊಡೆಯುವ ಕಾಂಗ್ರೆಸ್‌ ನಾಯಕರು ಜಮೀರ್‌ ಹೇಳಿಕೆಗೆ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ. ಜಮೀರ್‌ ಮತಾಂಧತೆ ಉನ್ಮತ್ತತೆಯಲ್ಲಿ ಬಡಬಡಾಯಿಸುತ್ತಿದ್ದಾರೆ. ವಕ್ಫ್‌ಬೋರ್ಡ್‌ ನಡೆಯುತ್ತಿರುವುದು ಸರ್ಕಾರದ ಹಣದಿಂದ. ಅವರು ಇನ್ನೂ ಜಿನ್ನಾ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ ಎಂದು ಸಚಿವರು ಲೇವಡಿ ಮಾಡಿದರು.

ವಕ್ಫ್‌ ಬೋರ್ಡ್‌ನಲ್ಲಿರುವ ಹಣ ಜಕಾತ್‌ ಕೊಟ್ಟು ಠೇವಣಿ ಮಾಡಿದ್ದಲ್ಲ. ಜಮೀರ್‌ ಕೊಡುವ ಜಕಾತ್‌ ಹಣವನ್ನು ನಾವು ಕೇಳುವುದಿಲ್ಲ. ವಕ್ಫ್‌ ಹಣವನ್ನು ಹೇಗೆ ಖರ್ಚು ಮಾಡಬೇಕು ಅಂತ ಹೇಳುವ ಅಧಿಕಾರ ಅವರಿಗೆ ಇಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.