ADVERTISEMENT

ವಿಜಯಪುರ ಗೋದಾಮು ದುರಂತ: ಏಳು ಸಾವು– ಮೃತರ ಕುಟುಂಬಗಳಿಗೆ ತಲಾ ₹7 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 20:11 IST
Last Updated 5 ಡಿಸೆಂಬರ್ 2023, 20:11 IST
<div class="paragraphs"><p>ವಿಜಯಪುರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ‘ರಾಜ್ ಗುರು ಫುಡ್‘ ಗೋದಾಮಿನಲ್ಲಿ ಎನ್‌ಡಿಆರ್‌ಎಫ್‌, ಎಸ್‌ಟಿಆರ್‌ಎಫ್‌, ಅಗ್ನಿ ಶಾಮಕ, ಪೊಲೀಸ್‌ ಸಿಬ್ಬಂದಿ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದರು –</p></div>

ವಿಜಯಪುರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ‘ರಾಜ್ ಗುರು ಫುಡ್‘ ಗೋದಾಮಿನಲ್ಲಿ ಎನ್‌ಡಿಆರ್‌ಎಫ್‌, ಎಸ್‌ಟಿಆರ್‌ಎಫ್‌, ಅಗ್ನಿ ಶಾಮಕ, ಪೊಲೀಸ್‌ ಸಿಬ್ಬಂದಿ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದರು –

   

ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ‘ರಾಜ್‌ ಗುರು ಫುಡ್ಸ್‌’ ಗೋದಾಮಿನಲ್ಲಿ ಮೆಕ್ಕೆಜೋಳ ಸ್ವಚ್ಛಗೊಳಿಸುವ ಯಂತ್ರದ ಪಿಲ್ಲರ್‌ಗಳು ಕುಸಿದು ಬಿದ್ದು, ಅದರಡಿ ಸಿಲುಕಿದ್ದ ಬಿಹಾರದ ಏಳು ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಬಿಹಾರದ ಸಮಷ್ಠಿಪುರ ಮತ್ತು ಬೇಗುಸರಾಯ್‌ ಜಿಲ್ಲೆಯ ರಂಬಿತ್‌ (36), ರಾಜೇಶ್ ಮುಖಿಯಾ (20), ಶಂಭು ಮುಖಿಯಾ (40), ರಾಮಬಾಲಕ (40), ಲುಕೋ ಯಾದವ್ (55), ಕೃಷ್ಣಕುಮಾರ್‌ ಮುಖಿಯಾ (18) ಮತ್ತು ಧುಲಾಚಂದ್‌ ಮುಖಿಯಾ (33) ಮೃತರು.

ಕಾರ್ಮಿಕರಾದ ಸೋನು ಕರಮಚಂದ್, ರವೀಶ್‌ ಕುಮಾರ್, ಅನಿಲ್, ಕಲ್ಮೇಶ್ವರ್ ಮುಖಿಯಾ, ಕಿಶೋರ್ ಹಂಜಾರಿಮಲ್ ಜೈನ್‌ ಮತ್ತು ಪ್ರಕಾಶ್ ಧುಮಗೊಂಡ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗಿದೆ. 

‘ಸೋಮವಾರ ಎಂದಿನಂತೆ ಗೋಣಿಚೀಲಕ್ಕೆ ಮೆಕ್ಕೆಜೋಳವನ್ನು ತುಂಬಿಸುವ ಕಾರ್ಯದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ನಿರತರಾಗಿದ್ದರು. ಮೆಕ್ಕೆಜೋಳ ಸ್ವಚ್ಛಗೊಳಿಸುವ ಯಂತ್ರದ ಪಿಲ್ಲರ್‌ಗಳು ಸಂಜೆ 5ರ ಸುಮಾರಿಗೆ ಏಕಾಏಕಿ ಕುಸಿದು, ಭಾರಿ ಸ್ಫೋಟದ ಸದ್ದು ಕೇಳಿಸಿತು. ಆತಂಕದಿಂದ ಕೆಲವರು ಓಡಿದರು. 13 ಕಾರ್ಮಿಕರು ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿದರು. ಅವರಲ್ಲಿ 7 ಮಂದಿ ಮೃತಪಟ್ಟರೆ, ಇನ್ನೂ 6 ಮಂದಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು.

ತಲಾ ₹7 ಲಕ್ಷ ಪರಿಹಾರ:

ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಧ್ಯರಾತ್ರಿ 12.30ಕ್ಕೆ ಘಟನಾ ಸ್ಥಳಕ್ಕೆ ಬಂದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆತಂಕ ಮತ್ತು ನೋವಿನಲ್ಲಿದ್ದ ಇತರ ಕಾರ್ಮಿಕರಿಗೆ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಘಟನೆ ಕುರಿತು ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದರು.

ವಿಜಯಪುರ ಜಿಲ್ಲಾಸ್ಪತ್ರೆಗೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಎಂ.ಬಿ.ಪಾಟೀಲ ಅವರು ಮೃತ ಕಾರ್ಮಿಕರಿಗೆ ಅಂತಿಮ ನಮನ ಸಲ್ಲಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ ₹7 ಲಕ್ಷ ಪರಿಹಾರ ಕೊಡಲಾಗುವುದು. ‘ರಾಜ್‌ಗುರು ಫುಡ್ಸ್‌’ನ ಮಾಲೀಕ ಕಿಶೋರ್ ಜೈನ್ ₹5 ಲಕ್ಷ ನೀಡಿದರೆ, ರಾಜ್ಯ ಸರ್ಕಾರವು ₹2 ಲಕ್ಷ ಪರಿಹಾರ ಕೊಡಲಿದೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬ ಕಾರ್ಮಿಕನಿಗೆ ₹50 ಸಾವಿರ ಪರಿಹಾರ ಕೊಡಲಾಗುವುದು’ ಎಂದರು.

‘ಕಾರ್ಮಿಕರ ಶವಗಳನ್ನು ಸಮೀಪದ ವಿಮಾನ ನಿಲ್ದಾಣದ ಮೂಲಕ ಬಿಹಾರ ರಾಜಧಾನಿ ಪಟ್ನಾಕ್ಕೆ ವಿಮಾನದಲ್ಲಿ ಸಾಗಿಸಿ, ಕಾರ್ಮಿಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದರು. 

15 ಗಂಟೆ ಕಾರ್ಯಾಚರಣೆ:

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ನೇತೃತ್ವದಲ್ಲಿ ಪೊಲೀಸರು, ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಮಿಕರ ರಕ್ಷಣೆಗಾಗಿ 15 ಗಂಟೆ ಆಹೋರಾತ್ರಿ ಕಾರ್ಯಾಚರಣೆ ನಡೆಸಿದರು.

ಬೆಳಗಾವಿ, ಕಲಬುರಗಿಯಿಂದ ರಾಜ್ಯ ವಿಪತ್ತು ಕಾರ್ಯನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಮಧ್ಯರಾತ್ರಿ 2.30ಕ್ಕೆ ಮತ್ತು ಪುಣೆಯಿಂದ ರಾಷ್ಟ್ರೀಯ ವಿಪತ್ತು ಕಾರ್ಯನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮಂಗಳವಾರ ಬೆಳಿಗ್ಗೆ 8ಕ್ಕೆ ಸ್ಥಳಕ್ಕೆ ಬಂದು ಕಾರ್ಯಾಚರಣೆಯಲ್ಲಿ ಭಾಗಿಯಾದವು.

‘ರಾಜ್ ಗುರು ಫುಡ್‘ ಗೋದಾಮಿನಲ್ಲಿ ನಡೆದ  ದುರ್ಘಟನೆಯಲ್ಲಿ ಕಾರ್ಮಿಕರೊಬ್ಬರ ಶವವನ್ನು ಮಂಗಳವಾರ ಹೊರತಂದ ಪೊಲೀಸ್‌ ಮತ್ತು ಎಸ್‌ಡಿಆರ್‌ಎಫ್‌ ತಂಡ

ಗೋದಾಮಿಗೆ ಸೋಮವಾರ ರಾತ್ರಿ ಭೇಟಿ ನೀಡಿದ್ದ ಸಚಿವ ಎಂ.ಬಿ.ಪಾಟೀಲ ಅವರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್‌ ರಕ್ಷಣಾ ಕಾರ್ಯಾಚರಣೆ ವಿವರ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ ಸೋನಾವಣೆ ಜಿ.ಪಂ. ಸಿಇಒ ರಾಹುಲ್‌ ಶಿಂಧೆ ಅವರಿಂದ ಮಾಹಿತಿ ಪಡೆದರು 

ವಿಜಯಪುರ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದ ಕಾರ್ಮಿಕರ ಮೃತದೇಹಗಳಿಗೆ ಸಚಿವ ಎಂ.ಬಿ.ಪಾಟೀಲ ಅಂತಿಮ ನಮನ ಸಲ್ಲಿಸಿ ಕ್ಷಣ ಹೊತ್ತು ಭಾವುಕರಾದರು 

ವಿಜಯಪುರ ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ದುರ್ಘಟನೆ ನಡೆದ ‘ರಾಜ್ ಗುರು ಫುಡ್‘ ಗೋದಾಮಿನಲ್ಲಿ ಮೆಕ್ಕೆಜೋಳ ಸ್ವಚ್ಛಗೊಳಿಸುವ ಯಂತ್ರದ ಪಿಲ್ಲರ್‌  ಉರುಳಿ ಬಿದ್ದಿರುವುದನ್ನು ಎನ್‌ಡಿಆರ್‌ಎಫ್‌ ತಂಡ ಪರಿಶೀಲಿಸಿತು 

ವಿಜಯಪುರ ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ದುರ್ಘಟನೆ ನಡೆದ ‘ರಾಜ್ ಗುರು ಫುಡ್‘ ಗೋದಾಮಿನಲ್ಲಿ ಎನ್‌ಡಿಆರ್‌ಎಫ್‌ ಎಸ್‌ಟಿಆರ್‌ಎಫ್‌ ಹಾಗೂ ಅಗ್ನಿ ಶಾಮಕ ಪೊಲೀಸ್‌ ಸಿಬ್ಬಂದಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಸಿದರು

ರಾಜ್ಯದಲ್ಲಿ ಎಲ್ಲಿಯೂ ಇಂತಹ ದುರ್ಘಟನೆ ಮರುಕಳಿಸುವುದನ್ನು ತಡೆಯಲು ಎಲ್ಲ ಕಾರ್ಖಾನೆ ವ್ಯಾಪಾರ ಕೇಂದ್ರಗಳಲ್ಲಿ ಸುರಕ್ಷತಾ ವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು 
– ಎಂ.ಬಿ.ಪಾಟೀಲ, ಸಚಿವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ

ಅವಘಡಕ್ಕೆ ನಿರ್ಲಕ್ಷ್ಯ ಕಾರಣ; ಪ್ರಕರಣ ದಾಖಲು

ಗೋದಾಮಿನಲ್ಲಿ ಕಾರ್ಮಿಕರ ರಕ್ಷಣೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿರಲಿಲ್ಲ ಮತ್ತು ಯಂತ್ರೋಪಕರಣಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಇದರ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಆರೋಪದ ಮೇಲೆ ಗೋದಾಮಿನ ಮಾಲೀಕ ಕಿಶೋರ ಜೈನ್‌ ಮತ್ತು ಮೇಲ್ವಿಚಾರಕ ಪ್ರವೀಣಚಂದ್ರ ಶ್ರೀವೇದಿ ವಿರುದ್ಧ ವಿಜಯಪುರ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.  ‘ರಾಜಗುರು ಫುಡ್ಸ್‌’ ಎಂಬುದು ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಿ ಶುಚಿಗೊಳಿಸಿ ಗೋಣಿ ಚೀಲದಲ್ಲಿ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡುವ ಸಂಸ್ಥೆಯಾಗಿದ್ದು ಇಲ್ಲಿ ಪ್ಯಾಕಿಂಗ್‌ ಘಟಕ ಗೋದಾಮು ಇವೆ.  ಸುಮಾರು 50 ಕಾಯಂ ಸಿಬ್ಬಂದಿ ಇದ್ದಾರೆ. 150 ಮಂದಿ ಬಿಹಾರದ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರತಿ ದಿನಕ್ಕೆ ₹500 ರಿಂದ ₹600 ಕೂಲಿ ಕೊಡಲಾಗುತ್ತದೆ. ಈ ಗೋದಾಮಿನ ಒಳಗೆ 500 ರಿಂದ 600 ಟನ್‌ ಸಾಮರ್ಥ್ಯದ ಮೂರು ಸರಣಿ ಟ್ಯಾಂಕ್‌ಗಳು (ಮೆಕ್ಕೆಜೋಳ ಸ್ವಚ್ಛಗೊಳಿಸಿ ಸಂಗ್ರಹಿಸುವ) ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.