ADVERTISEMENT

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು | ಶಿಕಾರಿಪುರಕ್ಕೆ ₹1100 ಕೋಟಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 20:15 IST
Last Updated 6 ಸೆಪ್ಟೆಂಬರ್ 2019, 20:15 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಒಂದು ತಿಂಗಳಲ್ಲೇ ತಮ್ಮ ತವರು ಕ್ಷೇತ್ರ ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ₹1,100 ಕೋಟಿ ಕೊಡುಗೆ ನೀಡಿದ್ದಾರೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 182 ಕೆರೆಗಳಿಗೆ ನೀರು ಹರಿಸಲು ₹850 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಮರು ದಿನವೇ 75 ಕೆರೆಗಳ ನೀರು ಭರ್ತಿಗೆ ₹250 ಕೋಟಿ ಬಿಡುಗಡೆ ಮಾಡಿದ್ದರು. ಹಾಗಾಗಿ ಈ ಒಂದು ತಿಂಗಳ ಅಂತರದಲ್ಲಿ ₹1,100 ಕೋಟಿ ಯೋಜನೆಗೆ ಒಪ್ಪಿಗೆ ನೀಡಿದಂತಾಗಿದೆ.

ಸಭೆ ನಂತರ ಮಾಹಿತಿ ನೀಡಿದ ಕಾನೂನು, ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ಕೆರೆಗಳಿಗೆ ನೀರು ತುಂಬಿಸುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಈಗ ಒಪ್ಪಿಗೆ ನೀಡಿರುವ ಅಷ್ಟೂ ಹಣವನ್ನೂ ಒಟ್ಟಾಗಿ ಬಿಡುಗಡೆ ಮಾಡುವುದಿಲ್ಲ. ಕಾಮಗಾರಿ ಪ್ರಗತಿ ನೋಡಿಕೊಂಡು, ಹಂತಹಂತವಾಗಿ ಕೊಡಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ತುಂಗಾಭದ್ರ ನೀರು: ಹಿರೇಕೆರೂರು ತಾಲ್ಲೂಕು ಪುರದಕೆರೆ ಗ್ರಾಮದ ಬಳಿ ತುಂಗಾಭದ್ರ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಶಿಕಾರಿಪುರ ತಾಲ್ಲೂಕಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ನಂತರ ಹೊಸೂರು, ತಾಳಗುಂದ, ಉಡುಗಣಿ ಹೋಬಳಿಯ ಕೆರೆಗಳಿಗೆ ಪೂರೈಕೆ ಮಾಡಲಾಗುತ್ತದೆ.

ಬಹು ವರ್ಷಗಳ ಬೇಡಿಕೆ:ಚಿತ್ರದುರ್ಗ ತಾಲ್ಲೂಕಿನ 39 ಕೆರೆಗಳಿಗೆ ತುಂಗಾಭದ್ರ ನದಿಯಿಂದ ನೀರು ತುಂಬಿಸಲು ₹522 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಹರಿಹರ ತಾಲ್ಲೂಕು ರಾಜನಹಳ್ಳಿ ಬಳಿ ಏತ ನೀರಾವರಿ ಯೋಜನೆಯಿಂದ ನೀರನ್ನು ಮೇಲೆತ್ತಿ, ಪೈಪ್‌ಲೈನ್ ಮೂಲಕ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಕೆರೆ ತುಂಬಿಸಲಾಗುತ್ತದೆ. ಅಲ್ಲಿಂದ ಇತರ ಕೆರೆಗಳಿಗೆ ಹರಿಸಲಾಗುತ್ತದೆ.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ರೈತರು, ಜನಪ್ರತಿನಿಧಿಗಳ ಬಹುದಿನಗಳ ಹೋರಾಟಕ್ಕೆ ಈಗ ಸ್ಪಂದನೆ ಸಿಕ್ಕಂತಾಗಿದೆ.

ಜಗಳೂರು ತಾಲ್ಲೂಕು:ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ 53 ಕೆರೆಗಳ ಭರ್ತಿಗೆ ₹660 ಕೋಟಿ ನೀಡುವ ಯೋಜನೆಗೆ ಒಪ್ಪಿಗೆ ಕೊಡಲಾಗಿದೆ. ಎರಡು ಹಂತದಲ್ಲಿ ಯೋಜನೆ ಕೈಗೆತ್ತಿಕೊಂಡು, ಮೊದಲ ಹಂತದಲ್ಲಿ ₹250 ಕೋಟಿ ಬಿಡುಗಡೆ ಮಾಡಲು ಹಿಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಆದರೀಗ ಹಿಂದಿನ ನಿರ್ಧಾರವನ್ನು ಮಾರ್ಪಾಟು ಮಾಡಿದ್ದು, ಪ್ರಸ್ತುತ ₹660 ಕೋಟಿ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ.

ಕೆರೆಗಳಿಗೆ ನದಿ ನೀರು ಹರಿಸಲು ಚಿಂತನೆ

ಜಲಾಶಯಗಳು ಭರ್ತಿಯಾದ ನಂತರ ಸಮುದ್ರ ಸೇರಿ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ಕೆರೆಗಳ ಭರ್ತಿಗೆ ಗಂಭೀರ ಚಿಂತನೆ ನಡೆದಿದೆ ಎಂದುಜೆ.ಸಿ.ಮಾಧುಸ್ವಾಮಿ ತಿಳಿಸಿದರು.

‘ಕೆರೆಗಳಿಗೆ ನೇರವಾಗಿ ನೀರು ತುಂಬಿಸಲು ಸಾಧ್ಯವಾಗದಿದ್ದರೆ, ಸಮೀಪದಲ್ಲಿ ಬ್ಯಾರೇಜ್ ನಿರ್ಮಿಸಿ ನೀರು ಸಂಗ್ರಹಿಸಿ ಇಟ್ಟುಕೊಂಡು, ಬೇಕಾದಾಗ ಹರಿಸಬಹುದು. ಈ ಬಗ್ಗೆ ಸಮರ್ಪಕ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಕೆರೆಗಳಿಗೆ ಜಿಪಿಎಸ್ ಅಳವಡಿಸಲು ಚಿಂತಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.