ADVERTISEMENT

ಬಾವಿಗೆ ಕ್ರಿಮಿನಾಶಕ ಬೆರೆಸಿದ ಘಟನೆ: ಬಾವಿಯ ನೀರೆಂದರೆ ಬೆಚ್ಚಿಬೀಳುವ ಜನ

ನಾಲ್ಕು ಟ್ಯಾಂಕರ್‌ಗಳಲ್ಲಿ ತೆಗ್ಗಳ್ಳಿ, ಶಾಖಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ

ಮಲ್ಲೇಶ್ ನಾಯಕನಹಟ್ಟಿ
Published 10 ಜನವರಿ 2019, 15:18 IST
Last Updated 10 ಜನವರಿ 2019, 15:18 IST
ಯಾದಗಿರಿಯ ಜಿಲ್ಲೆ, ಹುಣಸಗಿ ತಾಲ್ಲೂಕಿನ ತೆಗ್ಗಳ್ಳಿ, ಶಾಖಾಪುರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಮುದನೂರು ಬಳಿಯ ಬಾವಿ ಸ್ಥಳ ಪರಿಶೀಲಿಸಿದರುಪ್ರಜಾವಾಣಿ ಚಿತ್ರಗಳು: ಪವನ್‌ ಕುಲಕರ್ಣಿ
ಯಾದಗಿರಿಯ ಜಿಲ್ಲೆ, ಹುಣಸಗಿ ತಾಲ್ಲೂಕಿನ ತೆಗ್ಗಳ್ಳಿ, ಶಾಖಾಪುರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಮುದನೂರು ಬಳಿಯ ಬಾವಿ ಸ್ಥಳ ಪರಿಶೀಲಿಸಿದರುಪ್ರಜಾವಾಣಿ ಚಿತ್ರಗಳು: ಪವನ್‌ ಕುಲಕರ್ಣಿ   

ಯಾದಗಿರಿ: ನಿನ್ನೆಯಿಂದ ನೀರು ಕಂಡರೆ ಅಂಜಿಕೆ ಬರತೈತಿ.. ನೀರ್ ಕೊಡಿ ಎಂದು ಮಕ್ಕಳು ಅಂಗಲಾಚಿದ್ರೂ ಆತಂಕದಲ್ಲಿ ನೀರ್ ಕುಡಿಸ್ಯಾಕ ಹತ್ತೀವಿ.. ಊಟ ಆದ್‌ ಮ್ಯಾಲ ಊರಾಗೀನ್ ಮಂದಿ ನೀರ್ ಗುಟುಕರಿಸ್ತಾರ..

ಮುದನೂರಿನಲ್ಲಿ ಬಾವಿಗೆ ಕ್ರಿಮಿನಾಶಕ ಬೆರೆಸಿದ ಘಟನೆಯ ನಂತರ ತೆಗ್ಗಳ್ಳಿ, ಶಾಖಾಪುರ ಊರುಗಳಲ್ಲಿ ಗುರುವಾರ ಕಂಡ ಚಿತ್ರಣಗಳಿವು.

ಫ್ಲೋರೈಡ್‌ ಹೆಚ್ಚಿರುವ ಈ ಎರಡೂ ಗ್ರಾಮಗಳಲ್ಲಿ ನೀರಿನ ಅಭಾವ ವರ್ಷದುದ್ದಕ್ಕೂ ಕಾಡುತ್ತಲೇ ಬಂದಿದೆ. ಈಗ ಈ ಘಟನೆಯಿಂದಾಗಿ ಜನರು ಮತ್ತಷ್ಟೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ADVERTISEMENT

ಎಲ್ಲಿ ತೋಡಿದರೂ ಕುಡಿಯಲು ಯೋಗ್ಯ ನೀರು ಸಿಗದೇ ಇದುದ್ದರಿಂದ ಮುದನೂರು ಬಳಿ ಬಾವಿ ನಿರ್ಮಿಸಿ ಅಲ್ಲಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಕೆಲವೇ ದಿನಗಳಷ್ಟರ ಮಟ್ಟಿಗೆ ಶುದ್ಧೀಕರಣ ಘಟಕದಿಂದ ನೀರು ಪೂರೈಕೆಯಾಗಿದೆ. ಆಗ, ಜನರ ಆರೋಗ್ಯವೂ ಸುಧಾರಿಸಿತ್ತು. ಆದರೆ, ಈಗ ಅದು ಕೆಟ್ಟು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಗ್ರಾಮದ ಯುವ ಗಿರೀಶ್ ಪಾಟೀಲ.

ಆದರೆ, ಬಾವಿಯಲ್ಲಿನ ಒಂದಷ್ಟು ಸಿಹಿನೀರನ್ನೇ ಈ ಎರಡು ಗ್ರಾಮಗಳು ನೆಚ್ಚಿಕೊಂಡಿದ್ದವು. ಈ ಸಲ ಬರ ಕೂಡ ಮೈಚಾಚಿಕೊಂಡಿರುವುದರಿಂದ ಬಾವಿಯಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಆದರೂ, ಸಿಕ್ಕಷ್ಟು ನೀರನ್ನೇ ಎರಡೂ ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಈಗ ಈ ಘಟನೆಯಿಂದ ಬಾವಿಯ ನೀರೆಂದರೆ ಜನರು ಬೆಚ್ಚಿಬೀಳುವಂತಾಗಿದೆ ಎನ್ನುತ್ತಾರೆ ಅವರು.

‘ಊಟ ಮಾಡಿದರೆ ನೀರು ಕುಡಿಯಬೇಕಾಗುತ್ತದೆ. ಹಾಗಾಗಿ, ಊಟವೂ ಸೇರುತ್ತಿಲ್ಲ.. ನೀರೂ ಸಹ್ಯವಾಗುತ್ತಿಲ್ಲ.. ನೀರು ಕುಡಿಯುವವರನ್ನು ಕಂಡರೆ ಅಂಜಿಕೆ ಬರುತ್ತದೆ.. ಎಂಥಾ ಅನಾಹುತ ಆಗಿಬಿಡ್ತಿತ್ತೋ ಯಪ್ಪಾ.. ಅದೃಷ್ಟವಶಾತ್ ಭಾರೀ ದುರಂತ ತಪ್ತು. ಇಲ್ಲದಿದ್ದರೆ ಮನೆಗೆ ನಾಲ್ಕು ಹೆಣ ಬೀಳ್ತಿತ್ತೋ ಯಪ್ಪಾ.. ಎಂದು ಶಾಖಾಪುರದ ಗಂಗವ್ವ, ಮಾರಕ್ಕ ಗುರುವಾರ ‘ಪ್ರಜಾವಾಣಿ’ ಎದುರು ಅಳಲುತೋಡಿಕೊಂಡರು.

ಹಾಗೆ ನೋಡಿದರೆ ಈ ಭಾಗದಲ್ಲಿ ಹಲವು ತೆರೆದ ಬಾವಿಗಳಿವೆ. ಅವುಗಳಲ್ಲಿ ನೀರಿನ ಸಂಗ್ರಹ ಕೂಡ ಇದೆ. ಅಲ್ಲಿನ ಜನ, ಜಾನುವಾರುಗಳು ಸಹ ಒಮ್ಮೊಮ್ಮೆ ದಾಹ ತಾಳಲಾರದೇ ನೀರು ಕುಡಿಯುತ್ತಾರೆ. ಬೇಸಿಗೆಯಲ್ಲಿ ಈ ಬಾವಿಗಳು ಜನರಿಗೆ ಅನಿವಾರ್ಯವೂ ಹೌದು. ಆದರೆ, ಈಗ ಈ ಭಾಗದಲ್ಲಿ ಜನರು ಬಾವಿ ನೀರೆಂದರೇನೆ ಬೆಚ್ಚಿಬೀಳುವಂತಾಗಿದೆ.

**
ಹೊನ್ನಮ್ಮ ಮನೆ ಆವರಣದಲ್ಲಿ ಮಡುಗಟ್ಟಿದ ದುಃಖ

ಹೊನ್ನಮ್ಮ ಕೂಲಿ ಕೆಲಸ ಮಾಡಿಕೊಂಡು ಇದ್ದಳು. ಆಕೆಗೆ ಬೆನ್ನು ಬ್ಯಾನಿ ಬಿಟ್ಟರೆ ಬೇರೆನೂ ಕಾಯಿಲೆ ಇರಲಿಲ್ಲ. ಆದರೆ, ಬುಧವಾರ ನೀರು ಕುಡಿದ ಮೇಲೆ ವಾಂತಿ ಶುರುವಾಯಿತು. ಬರೀ ವಾಂತಿ ಅಂದುಕೊಂಡರೆ ರಕ್ತವಾಂತಿ ಹೆಚ್ಚಿತು. ಅಷ್ಟರಲ್ಲೇ ಪ್ರಾಣ ಹೋಯಿತು..

ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಮೃತಪಟ್ಟ ಹೊನ್ನ ಅವರ ಮನೆಯ ಮುಂದೆ ಹೀಗೆ ದುಃಖ ಮಡುಗಟ್ಟಿದ ಜನರು ಮಾತನಾಡುತ್ತಿದ್ದರು.

ಸಾವಿನ ಸುದ್ದಿ ಸಹಿಸಿಕೊಳ್ಳಲು ಆಗದ ಮಹಿಳೆಯರು ಎದೆ ಒಡೆದುಕೊಂಡು ಕಣ್ಣೀರಿಟ್ಟರು. ಅಳುವ ಮಹಿಳೆ, ವೃದ್ಧರನ್ನು ಕಂಡು ಇಡೀ ಊರಿಗೆ ಊರೇ ದುಃಖದಲ್ಲಿ ಉಮ್ಮಳಿಸುತ್ತಿತ್ತು.

**
ನಾಲ್ಕು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ

ಸಮೀಪದ ಯಡಿಯಾಪುರ, ಮುದನೂರು ಗ್ರಾಮಗಳಲ್ಲಿನ ಕೊಳವೆ ಬಾವಿಗಳಿಂದ ತೆಗ್ಗಳ್ಳಿ, ಶಾಖಾಪುರ ಗ್ರಾಮಗಳಲ್ಲಿನ ಜನರಿಗೆ ಜಿಲ್ಲಾಡಳಿತ ಒಟ್ಟು ನಾಲ್ಕು ಟ್ಯಾಂಕರ್‌ ಗಳಲ್ಲಿ ನೀರು ಪೂರೈಕೆಗೆ ತತಕ್ಷಣ ಕ್ರಮಕೈಗೊಡಿದೆ.

ಗ್ರಾಮಕ್ಕೆ ಎರಡು ಟ್ಯಾಂಕರ್‌ಗಳು ನೀರು ಪೂರೈಕೆ ಮಾಡುತ್ತಿವೆ. ಜಿಲ್ಲಾಡಳಿತ ತಿಳಿಸುವವರೆಗೂ ಬಾವಿಯಲ್ಲಿನ ನೀರು ಬಳಕೆ ಮಾಡಬಾರದು ಎಂಬುದಾಗಿ ಸೂಚಿಸಲಾಗಿದೆ. ನೀರನ್ನು ಪರೀಕ್ಷಾರ್ಥವಾಗಿ ಕಲಬುರ್ಗಿ ಪರೀಕ್ಷಾರ್ಥ ಕೇಂದ್ರಕ್ಕೆ ಕಳುಹಿಸಲಾಗಿದೆ. ಈಗಾಗಲೇ ಬಾವಿಯಲ್ಲಿನ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಲಾಗಿದೆ. ಮರು ನೀರು ಸಂಗ್ರಹ ಮಾಡಿ ಅದನ್ನು ತಪಾಸಣೆಗೊಳಪಡಿಸಿ ವರದಿ ಬಂದ ನಂತರ ಬಳಕೆಗೆ ಸೂಚಿಸಲಾಗುವುದು. ಅಲ್ಲಿಯವರೆಗೂ ಜನರು ಬಾವಿ ನೀರು ಕುಡಿಯುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು.

**
ಉದ್ದೇಶವಾಗಿ ಕೃತ್ಯ ಎಸಗಿದ್ದಾರೆ: ಸಚಿವ

ಕ್ರಿಮಿನಾಶಕ ಬೆರೆಸಿರುವ ಸ್ಥಳ ಪರಿಶೀಲಿಸಿದ್ದೇನೆ. ಉದ್ದೇಶ ಪೂರ್ವಕವಾಗಿಯೇ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ, ಈ ಕೃತ್ಯದ ಹಿಂದಿರುವವರು ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ.

ಇಂಥಾ ಘಟನೆ ಮರುಕಳುಹಿಸಬಾರದು. ಈ ಕಾರಣಕ್ಕಾಗಿಯೇ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಈ ಘಟನೆಯಿಂದ ಅಸ್ವಸ್ಥರಾದವರಿಗೆ ಸರ್ಕಾರದ ವೆಚ್ಚ ಭರಿಸಲಿದೆ. ಮೃತ ಹೊನ್ನಮ್ಮ ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕಿದೆ. ಅದಕ್ಕೆ ಸಿಎಂ ಅವರೊಂದಿಗೆ ಚರ್ಚೆ ನಡೆಸಿದ ನಂತರ ಪರಿಹಾರ ಮೊತ್ತ ಘೋಷಿಸಲಾಗುವುದು’ ಎಂದರು.

ಕಠಿಣ ಕ್ರಮ ಅಗತ್ಯ: ಶಾಸಕ ರಾಜೂಗೌಡ

ವೈಯಕ್ತಿ ವೈಷಮ್ಯ ಇದ್ದರೆ ನೀರಿಗೆ ವಿಷ ಬೆರೆಸುವುದು ಅತ್ಯಂತ ಹೇಯಕೃತ್ಯ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಘಟನೆಯಲ್ಲಿ ನೊಂದವರಿಗೆ ಸಮಾಧಾನ ಮತ್ತು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಕೃತ್ಯಕ್ಕೆ ಕಾರಣರಾದವರನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಸುರಪುರ ಮತಕ್ಷೇತ್ರದ ಶಾಸಕ ನರಸಿಂಹ ನಾಯಕ (ರಾಜೂಗೌಡ) ಎರಡೂ ಗ್ರಾಮಗಳಿಗೆ ಭೇಟಿ ನೀಡಿದ ನಂತರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು.

**
ಪಿಡಿಒಗೆ ಗೃಹ ಬಂಧನ

ನೀರಿಗೆ ಕ್ರಿಮಿನಾಶ ಬೆರೆಸಿರುವ ಘಟನೆಗೆ ಸಂಬಂಧಿಸಿದಂತೆ ಅರಕೇರಾ (ಬೆ) ಗ್ರಾಮ ಪಂಚಾಯಿತಿ ಪಿಡಿಒ ಸಿದ್ರಾಮಪ್ಪ ಅವರನ್ನು ಗ್ರಾಮಸ್ಥರು ಗುರುವಾರ ಕೆಲ ಗಂಟೆಗಳ ಕಾಲ ಗೃಹಬಂಧನದಲ್ಲಿ ಇರಿಸಿದ್ದರು.

ಘಟನೆಗೆ ಪಿಡಿಒ ನಿರ್ಲಕ್ಷ್ಯ ಕಾರಣ ಎಂದು ಗ್ರಾಮಸ್ಥರ ಒಂದು ಗುಂಪು ಆರೋಪಿಸಿ ಪಿಡಿಒ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿತು. ಅದೇ ಗ್ರಾಮದ ಗ್ರಾಮಸ್ಥರ ಮತ್ತೊಂದು ಗುಂಪು ಘಟನೆಗೆ ಪಿಡಿಒ ಕಾರಣರಲ್ಲ. ಅವರ ಮೇಲೆ ಹಲ್ಲೆ ನಡೆಸುವಂತಿಲ್ಲ ಎಂದು ಪಟ್ಟು ಹಿಡಿಯಿತು. ಹೀಗೆ ಎರಡೂ ಗುಂಪುಗಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ನಂತರ ಪೊಲೀಸರು ಪಿಡಿಒ ಸಿದ್ರಾಮಪ್ಪ ಅವರನ್ನು ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.