ADVERTISEMENT

ನೀರಿಗೆ ವಿಷ ಬೆರೆಸಿದ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 6:53 IST
Last Updated 10 ಜನವರಿ 2019, 6:53 IST
   

ಬೆಂಗಳೂರು: ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ್ದರಿಂದ ಹಲವರು ಅಸ್ವಸ್ಥರಾಗಿ ಮಹಿಳೆಯೊಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವಿವರ ಪಡೆದಿದ್ದು ಕೂಡಲೇ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ.

ಈ ಪ್ರಕರಣದ ಬಗ್ಗೆ ತ್ವರಿತವಾಗಿ ತನಿಖೇ ನಡೆಸಿ ಇಂತಹ ದುಷ್ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.

ಹುಣಸಗಿ ತಾಲ್ಲೂಕಿನ ಮುದನೂರು, ತೆಗ್ಗಳ್ಳಿ, ಶಾಖಾಪುರ ಗ್ರಾಮಗಳಿಗೆ ಪೂರೈಸುವ ಕುಡಿಯುವ ನೀರಿಗೆ ಕಿಡಿಗೇಡಿಗಳು ಕ್ರಿಮಿನಾಶಕ ಸೇರಿಸಿದ್ದು, ಅದೃಷ್ಟವಶಾತ್‌ ಅನಾಹುತ ಬುಧವಾರ ತಪ್ಪಿದೆ.

ADVERTISEMENT

ಮುದನೂರಲ್ಲಿರುವ ತೆರೆದಬಾವಿಗಳಿಂದಮುದನೂರು, ತೆಗ್ಗಳ್ಳಿ, ಶಾಖಾಪುರ ಗ್ರಾಮಗಳ ಜನರಿಗೆ ಕುಡಿಯಲು ನೀರು ಪೂರೈಸಲಾಗುತ್ತಿದೆ. ಈ ನೀರನ್ನು ಮೊದಲು ಶುದ್ಧೀಕರಣ ಘಟಕದಲ್ಲಿ ಸಂಗ್ರಹಿಸಿ ನಂತರ ಪೂರೈಸಲಾಗುತಿತ್ತು. ಆದರೆ, ಶುದ್ಧೀಕರಣ ಘಟಕ ದುರಸ್ತಿಯಲ್ಲಿದೆ. ಹಾಗಾಗಿ, ತೆರೆದಬಾವಿಯಿಂದ ನೇರವಾಗಿ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ.

ಬುಧವಾರ ಕಿಡಿಗೇಡಿಗಳು ನೀರು ಪೂರೈಸುವ ಪೈಪ್‌ಲೈನ್‌ ವಾಲ್ವ್‌ ಮೂಲಕ ಕ್ರಿಮಿನಾಶಕವನ್ನು ನೀರಿಗೆ ಬೆರೆಸಿದ್ದಾರೆ ಎನ್ನಲಾಗಿದೆ.

ಮುದನೂರಿಗೆ ಪೊಲೀಸರ ತಂಡ

ಮುಖ್ಯಂತ್ರಿಗಳ ಸೂಚನೆಯಂತೆ ಮುದನೂರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ತಂಡ ಆಗಮಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ತೆರೆದ ಬಾವಿ ಬಳಿ ಪೊಲೀಸ್ ತಂಡ ಪರಿಶೀಲನೆ ನಡೆಸಿತು.

ನಂತರ ಗ್ರಾಮದಲ್ಲಿನ ಕೆಲ ಮುಖಂಡರ ಜತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.