ಬೆಂಗಳೂರು: ‘ನಗರದಲ್ಲಿ ನೀರಿನ ದರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದ್ದು, ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳಕ್ಕೆ ಚಿಂತನೆ ನಡೆದಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ರಾಮೋಜಿ ಗೌಡ ಅವರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, 2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ‘ ಎಂದು ಉಲ್ಲೇಖಿಸಿದರು.
‘ಈಗ, ಪ್ರತಿ ಲೀಟರ್‌ಗೆ 7-8 ಪೈಸೆ ಹೆಚ್ಚಿಸಲು ಬೆಂಗಳೂರು ಜಲ ಮಂಡಳಿ ಪ್ರಸ್ತಾವ ಸಲ್ಲಿಸಿದೆ. ಒಮ್ಮೆಗೆ ಹೆಚ್ಚಿಸುವುದು ಸರಿಯಲ್ಲ. ಬಿಬಿಎಂಪಿ ಬಜೆಟ್ ಸಿದ್ಧಪಡಿಸುವಾಗ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು. 1 ಪೈಸೆ ಹೆಚ್ಚಳ ಮಾಡಿದರೆ ಮಂಡಳಿಗೆ ಆಗುತ್ತಿರುವ ವಾರ್ಷಿಕ ಸುಮಾರು ₹1 ಸಾವಿರ ಕೋಟಿಯಷ್ಟು ನಷ್ಟ ತಪ್ಪಿಸಬಹುದು ಎಂದರು.
ಬೇಸಿಗೆಯ ತೀವ್ರತೆ ಈಗಾಗಲೇ ಹೆಚ್ಚಾಗಿದೆ. ಕಳೆದ ವರ್ಷ ಸಂಕಷ್ಟದ ಸ್ಥಿತಿ ಇತ್ತು. ಏಳು ಸಾವಿರ ಕೊಳವೆಬಾವಿಗಳು ಬತ್ತಿದ್ದವು. ನೀರಿನ ಬವಣೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಖಾಸಗಿ ಟ್ಯಾಂಕರ್‌ಗಳನ್ನು ಪಾಲಿಕೆ ಸುಪರ್ದಿಗೆ ಪಡೆಯಲಾಗಿತ್ತು. ಈ ಬಾರಿಯೂ ಅಂತಹ ಮುಂಜಾಗ್ರತೆ ವಹಿಸಲಾಗುತ್ತಿದೆ. ಟ್ಯಾಂಕರ್ ನೀರಿಗೆ ಕನಿಷ್ಠ ದರ ನಿಗದಿ ಮಾಡಲಾಗುತ್ತದೆ ಎಂದು ಹೇಳಿದರು.
ಮಾರ್ಚ್ 22 ಜಲಸಂರಕ್ಷಣಾ ದಿನ. ಒಂದು ತಿಂಗಳು ಜಲ ಸಂರಕ್ಷಣಾ ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿದ್ದೇವೆ. ಕಾವೇರಿ 5ನೇ ಹಂತದ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. 110 ಹಳ್ಳಿಗಳಿಗೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಬತ್ತಿರುವ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದರು.
ಅಪಾರ್ಟ್‌ಮೆಂಟ್ ಸಮುಚ್ಛಯ ಕಟ್ಟಿದ ಗುತ್ತಿಗೆದಾರರು ಜಲಮಂಡಳಿಗೆ ನೀರಿನ ಸಂಪರ್ಕದ ಠೇವಣಿ ಪಾವತಿ ಮಾಡಿಲ್ಲ. ಅನುಮತಿ ಪಡೆಯದೆ ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಕಾವೇರಿ 6ನೇ ಹಂತ; ಡಿಪಿಆರ್ ಸಿದ್ಧ
ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಡಿಪಿಆರ್ ಸಿದ್ಧವಾಗಿದ್ದು ಸಚಿವ ಸಂಪುಟದ ಅನುಮತಿ ಪಡೆದ ನಂತರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಶಿವಕುಮಾರ್ ಹೇಳಿದರು. ಮಳೆನೀರು ಸಂಗ್ರಹ ಪದ್ಧತಿ ಕಡ್ಡಾಯಗೊಳಿಸಲಾಗುವುದು. ಕಟ್ಟಡ ನಿರ್ಮಾಣ ಮಾಡುವಾಗ ಮೂರು ಅಡಿ ಜಾಗವನ್ನೂ ಬಿಡದೆ ಕಾಂಕ್ರಿಟ್ ಹಾಕುತ್ತಿದ್ದಾರೆ. ಇದನ್ನು ತಪ್ಪಿಸಲು ಕಡ್ಡಾಯ ನಿಯಮ ರೂಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.