ADVERTISEMENT

ವನ್ಯಪ್ರಾಣಿಗಳ ದಾಹ ತಣಿಸಲು ಜೀವಜಲ ತೊಟ್ಟಿ

ಅರಣ್ಯ ರಕ್ಷಕನಿಂದ ‍ಪ್ರೇರಣೆ

ಸಂಧ್ಯಾ ಹೆಗಡೆ
Published 12 ಮೇ 2019, 20:30 IST
Last Updated 12 ಮೇ 2019, 20:30 IST
ತೊಟ್ಟಿ ಮಾದರಿ
ತೊಟ್ಟಿ ಮಾದರಿ   

ಶಿರಸಿ: ಬೆವರು ಸುರಿಸಿ ದುಡಿದ ಗಳಿಕೆ ಹಣವನ್ನು ಬಾಯಾರಿ ಬರುವ ವನ್ಯಪ್ರಾಣಿಗಳ ದಾಹ ಇಂಗಿಸಲು ವೆಚ್ಚ ಮಾಡಿದ್ದಾರೆ ಈ ಗ್ರಾಮಸ್ಥರು. 15ಕ್ಕೂ ಹೆಚ್ಚು ನೀರಿನ ತೊಟ್ಟಿಗಳನ್ನು ಖರೀದಿಸಿ, ಪ್ರಾಣಿಗಳು ಬರುವ ಪ್ರದೇಶದಲ್ಲಿ ಇಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಸ್ಫೂರ್ತಿಯಾದವರು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು!

ಬೇಸಿಗೆ ಬಂತೆಂದರೆ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಜಲಕ್ಷಾಮದ ಸಮಸ್ಯೆ ತಪ್ಪಿದ್ದಲ್ಲ. ಹೂಳುತುಂಬಿರುವ ಕೆರೆಗಳು ಬರಿದಾಗಿ ಅಸ್ಥಿಪಂಜರದಂತಾಗುತ್ತವೆ. ನೀರು ಅರಸಿ ಹಳ್ಳಿಯೆಡೆಗೆ ಬರುವ ಜಿಂಕೆಯಂತಹ ಪ್ರಾಣಿಗಳು ನಾಯಿ ದಾಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಕೆಲವು ಪ್ರಾಣಿಗಳು ರಾತ್ರಿ ವೇಳೆ, ರೈತರು ಬೋರ್‌ವೆಲ್‌ ನೀರು ಹಾಯಿಸಿ ಬೆಳೆದಿರುವ ಗದ್ದೆಗಳಿಗೆ ‌ನುಗ್ಗುತ್ತವೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಂಕನಾಳ ಬೀಟ್‌ನ ಅರಣ್ಯ ರಕ್ಷಕ ಮಂಜುನಾಥ ಸಿಗ್ಲಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.

ಇದರ ಫಲವಾಗಿ, ಬಂಕನಾಳ, ಬಿಳೂರು, ಕಂಡ್ರಾಜಿಯ 15ಕ್ಕೂ ಹೆಚ್ಚು ಉತ್ಸಾಹಿ ಕೃಷಿಕರು ಸೇರಿ, ನೀರಿನ ತೊಟ್ಟಿಯನ್ನು ಖರೀದಿಸಿದ್ದಾರೆ. ‘ನೀರು ಅರಸಿ ಬರುವ ಪ್ರಾಣಿಗಳಿಗೆ ಭಯವಾಗಬಾರದೆಂಬ ಕಾರಣಕ್ಕೆ ಬಿಳಿ–ಹಸಿರು ಬಣ್ಣವನ್ನೇ ಬಳಿಯಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಅವುಗಳನ್ನು ನಿಗದಿತ ಸ್ಥಳಗಳಲ್ಲಿ ಇಡಲಾಗುವುದು. ಇಲಾಖೆ ನೀರನ್ನು ಪೂರೈಕೆ ಮಾಡುವ ಭರವಸೆ ನೀಡಿದೆ. ಅವರಿಗೆ ಸಾಧ್ಯವಾಗದಿದ್ದಲ್ಲಿ ಗ್ರಾಮಸ್ಥರೇ ನೀರನ್ನು ಸರಬರಾಜು ಮಾಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಕಂಡ್ರಾಜಿಯ ರಾಜೇಶ ನಾಯ್ಕ, ಎಂ.ಆರ್. ನಾಯ್ಕ.

ADVERTISEMENT

’ಸರ್ಕಾರಿ ನೌಕರರೊಬ್ಬರ ವಿಭಿನ್ನ ಯೋಚನೆ ಹಾಗೂ ಗ್ರಾಮಸ್ಥರ ಉತ್ಸಾಹದಿಂದ ಮಾದರಿ ಕಾರ್ಯ ಮಾಡಲು ಸಾಧ್ಯವಾಗಿದೆ. ಇದಕ್ಕೆ ತಗುಲಿರುವ ₹ 40ಸಾವಿರದಷ್ಟು ವೆಚ್ಚವನ್ನು ಗ್ರಾಮಸ್ಥರೇ ಭರಿಸಿದ್ದಾರೆ. ಬೇರೆ ಊರುಗಳಲ್ಲಿಯೂ ಇಂತಹ ಪ್ರಾಣಿ ರಕ್ಷಣೆ ಕಾರ್ಯ ಮಾಡಲು ಪ್ರೇರೇಪಿಸಲಾಗುವುದು’ ಎಂದು ಎಂ.ಕೆ.ನಾಯ್ಕ, ಗೋಡು ಸಾಬ್ ಹೇಳಿದರು.

’ಕಾಂಕ್ರೀಟ್ ರಿಂಗ್ ಅನ್ನು ತೊಟ್ಟಿಯನ್ನಾಗಿ ಪರಿವರ್ತಿಸಲಾಗಿದೆ. ಗ್ರಾಮಸ್ಥರು ನಡೆಸಿರುವ ಪ್ರಾಯೋಗಿಕ ಪ್ರಯತ್ನ ಯಶಸ್ಸು ಕಂಡ ಮೇಲೆ, ಮುಂದಿನ ದಿನಗಳಲ್ಲಿ ಇನ್ನಷ್ಟು ತೊಟ್ಟಿ ಇಡಲು ಯೋಚಿಸಲಾಗುವುದು’ ಎಂದು ಬನವಾಸಿ ಆರ್‌ಎಫ್‌ಒ ವಿನಯ ಭಟ್ಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಪ್ರಾಣಿಗಳು ಹೆಚ್ಚಾಗಿ ಬರುವಲ್ಲಿ ಮತ್ತು ಟ್ರ್ಯಾಕ್ಟರ್‌ ಮೂಲಕ ನೀರು ಕೊಂಡೊಯ್ದು ಹಾಕಲು ಸುಲಭವಾಗುವಂತೆ ತೊಟ್ಟಿಯನ್ನು ಇಡಲಾಗುವುದು

- ಬನವಾಸಿ ಆರ್‌ಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.