ADVERTISEMENT

ನೀರಿನ ಟ್ಯಾಂಕ್ ಸೆಂಟ್ರಿಂಗ್ ಕುಸಿತ: ಇಬ್ಬರು ಎಂಜಿನಿಯರ್‌ ಸೇರಿ ಮೂವರ ಸಾವು

23 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:15 IST
Last Updated 17 ಜೂನ್ 2019, 20:15 IST
ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಅಗ್ನಿಶಾಮಕ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಕ್ಯೂಆರ್‌ಟಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಅಗ್ನಿಶಾಮಕ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಕ್ಯೂಆರ್‌ಟಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು   

ಬೆಂಗಳೂರು:ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಚಾವಣಿಯ ಕಾಂಕ್ರೀಟ್‌ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿದು ಇಬ್ಬರು ಎಂಜಿನಿಯರ್‌ಗಳು ಸೇರಿದಂತೆ ಮೂವರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್‍ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಕಾಂಕ್ರೀಟ್‌ ಕಾಮಗಾರಿ ಉಪ ಗುತ್ತಿಗೆ ವಹಿಸಿದ್ದ ಎಸ್‌ಎಂಸಿ ಇನ್ಫ್ರಾಸ್ಟ್ರಕ್ಚರ್‌ ಸಂಸ್ಥೆಯ ಸೈಟ್‌ ಎಂಜಿನಿಯರ್‌ಗಳಾದ ಪ್ರಭುರಾವ್‌ (29), ಕೃಷ್ಣ ಯಾದವ್‌ (26) ಮತ್ತು ಸೈಟ್ ಮೇಲ್ವಿಚಾರಕಸುಮಂತಕರ್‌ (22) ಮೃತಪಟ್ಟ ದುರ್ದೈವಿಗಳು.

25 ಎಕರೆ ಜಾಗದಲ್ಲಿ ಮಂಡಳಿಯು ನಾಲ್ಕು ಎಸ್‌ಟಿಪಿಗಳನ್ನು ನಿರ್ಮಿಸುತ್ತಿದ್ದು, ಗುತ್ತಿಗೆ ಪಡೆದಿದ್ದ ಸೂರತ್‌ನ ‘ಎನ್ವಿರೊ ಕಂಟ್ರೋಲ್‌ ಅಸೋಸಿಯೇಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ ಕಾಂಕ್ರೀಟ್‌ ಕಾಮಗಾರಿಯ ಉಪ ಗುತ್ತಿಗೆಯನ್ನು ‘ಎಸ್‌ಎಂಸಿ
ಇನ್ಫ್ರಾಸ್ಟ್ರಕ್ಚರ್‌’ ಸಂಸ್ಥೆಗೆ ನೀಡಿತ್ತು. ಕೋಲ್ಕತ್ತ, ಬಿಹಾರ ಮತ್ತು ಚೆನ್ನೈ ಮೂಲದ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ADVERTISEMENT

10 ಕೋಟಿ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿಯ ಚಾವಣಿ‌ಯ ಕೆಲಸ ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯ ವೇಳೆ ಎಸ್‌ಎಂಸಿ ಇನ್ಫ್ರಾಸ್ಟ್ರಕ್ಚರ್‌ ಸಂಸ್ಥೆಯ ಮೂವರು ಎಂಜಿನಿಯರ್‌ಗಳು, ಇಬ್ಬರು ಮೇಲ್ವಿಚಾರಕರು, ಎನ್ವಿರೊ ಕಂಟ್ರೋಲ್‌ ಅಸೋಸಿಯೇಟ್ಸ್‌ ಇಂಡಿಯಾ ಸಂಸ್ಥೆಯ ಒಬ್ಬರು ಹಾಗೂ ಮತ್ತೊಂದು ಕಂಪನಿಯ ಇಬ್ಬರು ಎಂಜಿನಿಯರ್‌ಗಳು ಇದ್ದರು.

ಕಾಂಕ್ರೀಟ್‌ ಕೆಲಸ ಇನ್ನೇನು ಮುಕ್ತಾಯ ಹಂತ ತಲುಪಿದೆ ಎನ್ನುವಷ್ಟರಲ್ಲಿ, ಚಾವಣಿಗೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸಲಾಕೆಗಳು (ಸೆಂಟ್ರಿಂಗ್‌) ಏಕಾಏಕಿ ಕುಸಿದಿವೆ. ಕೆಳಗಡೆ ನಿಂತಿದ್ದ ಕೆಲವು ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ಮೇಲೆ ಈ ಸಲಾಕೆಗಳು ಮತ್ತು ಸಿಮೆಂಟ್‌ ಮಿಶ್ರಣ ಬಿದ್ದ ಪರಿಣಾಮ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸುವಷ್ಟರಲ್ಲಿ ಮೂವರು ಕೊನೆಯುಸಿರೆಳೆದಿದ್ದಾರೆ.

ಘಟನೆ ನಡೆದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವಶೇಷಗಳಡಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಸಿಲುಕಿರಬಹುದೆಂಬ ಸಂದೇಹ ವ್ಯಕ್ತವಾಗಿದ್ದರಿಂದ ಸಂತೋಷ್‌ ಕುಮಾರ್‌ ನೇತೃತ್ವದ 28 ಮಂದಿಯ ಎನ್‌ಡಿಆರ್‌ಎಫ್‌, 23 ಮಂದಿಯನ್ನೊಳಗೊಂಡ ತುರ್ತು ಸ್ಪಂದನಾ ಪಡೆ (ಕ್ಯುಆರ್‌ಟಿ), 18 ಸದಸ್ಯರನ್ನೊಳಗೊಂಡ ಎಸ್‌ಡಿಆರ್‌ಎಫ್‌ ತಂಡ ಸ್ಥಳಕ್ಕೆ ಬಂತು. ಸುಮಾರು ಎರಡು ಗಂಟೆ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಮತ್ತು ಹೆಬ್ಬಾಳ ಶಾಸಕ ಬೈರತಿ ಸುರೇಶ್, ಹೆಚ್ಚುವರಿ ಪೊಲೀಸ್ ಕಮಿಷನರ್‌ ಸೀಮಂತ್‍ಕುಮಾರ್ ಸಿಂಗ್ ಸ್ಥಳಕ್ಕೆ ಬಂದು ಪರಿಶೀಲಿಸಿದರು.

‘ತಪ್ಪಿತಸ್ಥರ ವಿರುದ್ಧ ಕ್ರಮ’

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ‘ಸೆಂಟ್ರಿಂಗ್‌ ಕುಸಿದು ಈ ದುರಂತ ಸಂಭವಿಸಿದೆ. ಈ ಅವಘಡಕ್ಕೆ ಕಾರಣವೇನು ಮತ್ತು ಕಟ್ಟಡ ಸುರಕ್ಷತೆಯ ವಿಷಯದಲ್ಲಿ ಲೋಪಗಳು ಆಗಿದೆಯೇ ಎಂಬ ಬಗ್ಗೆ ಪರಿಣತರಿಂದ ಅಭಿಪ್ರಾಯ ಪಡೆಯಲಾಗುವುದು. ಜಲಮಂಡಳಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಈ ಬಗ್ಗೆ ಅಧ್ಯಯನ ನಡೆಸಲಿದ್ದಾರೆ’ ಎಂದರು.

‘ಕಾಂಕ್ರೀಟ್‌ ಕಾಮಗಾರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದುದೇ ಘಟನೆಗೆ ಕಾರಣ ಎಂದು ಕೆಲವರು ಹೇಳಿದ್ದಾರೆ. ಕಾಂಕ್ರೀಟ್‌ ಹೆಚ್ಚು ಸುರಿದ ಪರಿಣಾಮ ದುರಂತ ಸಂಭವಿಸಿದೆ ಎನ್ನುವುದು ಇನ್ನೂ ಕೆಲವರ ಅನಿಸಿಕೆ. ಏನೇ ಇದ್ದರೂ ಈ ಬಗ್ಗೆ ತಜ್ಞರು ವರದಿ ನೀಡಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಆರು ಮಂದಿ ಬಂಧನ

ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಮೇಲ್ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿಕೊಂಡಿರುವ ಅಮೃತಹಳ್ಳಿ ಪೊಲೀಸರು, ಕಾಮಗಾರಿಯ ಗುತ್ತಿಗೆ ಪಡೆದ ಸಂಸ್ಥೆ ಹಾಗೂ ಜಲಮಂಡಳಿಯ ಆರು ಮಂದಿಯನ್ನು ಬಂಧಿಸಿದ್ದಾರೆ.

ಎಸ್‍ಎಂಸಿ ಇನ್ಫ್ರಾಸ್ಟ್ರಕ್ಚರ್‌ನ ಬೆಂಗಳೂರು ಉಸ್ತುವಾರಿ ಭರತ್, ಎಂಜಿನಿಯರ್ ಕಾರ್ತಿಕ್, ಎನ್ವಿರೋ ಕಂಟ್ರೋಲ್ ಅಸೋಸಿಯೇಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಗುತ್ತಿದಾರ ಸುರೇಂದ್ರ, ಮೆಕಾನಿಕಲ್ ಎಂಜಿನಿಯರ್ ಗೌರವ್‌, ಜಲಮಂಡಳಿಯ ಸಹಾಯಕ ಎಂಜಿನಿಯರ್‌ಗಳಾದ ಹನೀಫ್ ಮತ್ತು ಭಾಗ್ಯಲಕ್ಷ್ಮಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇತ್ತೀಚೆಗೆ ಕಟ್ಟಡ ಕುಸಿದು ಸಂಭವಿಸಿದ ದುರಂತಗಳು

2018ರ ಜ.18: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕ ಶಬರೀಷ್‌ (36) ಮೃತಪಟ್ಟರು.

ಫೆ.15: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‍ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಉತ್ತರ ಪ್ರದೇಶದ ಗೋರಖ್‍ಪುರದ ಮೂವರು ಕಾರ್ಮಿಕರು ಮೃತಪಟ್ಟರು.

ಅ.24: ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಶಿಡ್ಲಘಟ್ಟದ ಮಧುಸೂದನ್ (24) ಮೃತಪಟ್ಟರು.

ನ.10: ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಸುಫೇಲ್‌ ಮೃತಪಟ್ಟರು.

ಡಿ. 6: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟರು.

ಡಿ.13: ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ‘ಹೋಲಿಸೋಲ್’ ಕಂಪನಿ ಕಟ್ಟಡ ದುರಂತದಲ್ಲಿ ಒಡಿಶಾದ ಮೂವರು ಕಾರ್ಮಿಕರು ಅಸುನೀಗಿದರು.

2019ರ ಏ 5: ಯಶವಂತಪುರದ ಎಪಿಎಂಸಿ ಆವರಣದಲ್ಲಿ ನಿರ್ಮಾಣ ಹಂತದ ಪಾರ್ಕಿಂಗ್ ಕಟ್ಟಡದ ಸೆಂಟ್ರಿಂಗ್ ‌ಕುಸಿದು ಬಿಹಾರದ ರಾಕೇಶ್ (21) ಮತ್ತು ಪಶ್ಚಿಮ ಬಂಗಾಳದ ರಾಹುಲ್ ಗೋಸ್ವಾಮಿ (19) ಎಂಬಿಬ್ಬರು ಕಾರ್ಮಿಕರು ಮೃತಪಟ್ಟು, 12 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.