ADVERTISEMENT

‘ಸೀಟಿಗಾಗಿ ಭಿಕ್ಷೆ ಬೇಡುತ್ತಿಲ್ಲ’: ಕ್ಷೇತ್ರ ಹಂಚಿಕೆ ಬಗ್ಗೆ ಸಿಎಂ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:50 IST
Last Updated 19 ಫೆಬ್ರುವರಿ 2019, 19:50 IST
ಕುಮಾರಸ್ವಾಮಿ, ಸಿದ್ದರಾಮಯ್ಯ
ಕುಮಾರಸ್ವಾಮಿ, ಸಿದ್ದರಾಮಯ್ಯ   

ಮೈಸೂರು/ ಬೆಂಗಳೂರು: ‘ಕೈ’ಯಲ್ಲಿರುವ ಹಾಲಿ 10 ಕ್ಷೇತ್ರಗಳ ವಿಷಯದಲ್ಲಿ ರಾಜಿ ಇಲ್ಲ ಎಂದು ಕೆಪಿಸಿಸಿ ಚುನಾವಣಾ ಸಮಿತಿ ನಿರ್ಧರಿಸಿದ ಬೆನ್ನಲ್ಲೆ, ‘ಜೆಡಿಎಸ್‌ಗೆ ಅಷ್ಟು ಕೊಡಿ, ಇಷ್ಟು ಕೊಡಿ ಎಂದು ಕೇಳಲು ನಾವು ಭಿಕ್ಷುಕರಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಲೋಕಸಭೆ ಚುನಾವಣೆಗೂ ‘ಮೈತ್ರಿ’ ವಿಸ್ತರಿಸಿರುವ ಉಭಯ ಪಕ್ಷಗಳು, ಕ್ಷೇತ್ರ ಹಂಚಿಕೆ ಸಂಬಂಧ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆದರೆ, ಕಾಂಗ್ರೆಸ್‌ ಪ್ರತಿನಿಧಿಸುತ್ತಿರುವ ಕೆಲವು ಕ್ಷೇತ್ರಗಳ ಮೇಲೆ ಜೆಡಿಎಸ್‌ ಕಣ್ಣಿಟ್ಟಿದೆ. ಆ ಸ್ಥಾನಗಳನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.

‘ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ ನಾಯಕರು ನಮ್ಮ ಜತೆ ಚರ್ಚೆ ನಡೆಸಿಲ್ಲ. ಜೆಡಿಎಸ್‌ಗೆ ಇಂತಿಷ್ಟು ಸೀಟು ಬಿಟ್ಟು ಕೊಡಬೇಕೆಂಬ ನಿರ್ಧಾರದ ಬಗ್ಗೆ ಗೊತ್ತಿಲ್ಲ. ಏಳೋ, ಐದೋ, ಮೂರೋ... ಎಷ್ಟು ಬಿಟ್ಟು ಕೊಡುತ್ತಾರೋ ಗೊತ್ತಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ADVERTISEMENT

ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಒಟ್ಟಾಗಿ ಚುನಾವಣೆ ಎದುರಿಸಿ ರಾಷ್ಟ್ರರಾಜಕಾರಣದಲ್ಲಿ ಒಂದು ಸಂದೇಶ ಕೊಡಬೇಕು ಎಂಬುದು ನಮ್ಮ ಉದ್ದೇಶ. ಆದ್ದರಿಂದ ಸೀಟು ಹಂಚಿಕೆ ವಿಚಾರದಲ್ಲಿ ಜತೆಯಾಗಿ ಕುಳಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ದೇವೇಗೌಡರು ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚಿಸಿ ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಮೈತ್ರಿ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುವುದರತ್ತ ಮಾತ್ರ ಗಮನಹರಿಸಿದ್ದೇನೆ. ಇದನ್ನು ಹಲವು ಸಲ ಹೇಳಿದ್ದೇನೆ. ಸೀಟು ಹೊಂದಾಣಿಕೆ ವಿಷಯದಲ್ಲಿ ಎರಡೂ ಪಕ್ಷಗಳ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ’ ಎಂದರು.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಅವರೂ (ಜೆಡಿಎಸ್‌) ಭಿಕ್ಷುಕರಲ್ಲ, ನಾವೂ (ಕಾಂಗ್ರೆಸ್‌) ಭಿಕ್ಷುಕರಲ್ಲ. ಇದು ಸಮ್ಮಿಶ್ರ ಸರ್ಕಾರ’ ಎಂದರು.

‘ಸೋಮವಾರ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ಆದರೆ, ಹಾಲಿ 10 ಸ್ಥಾನಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದರು.

‘ಸೀಟು ಹಂಚಿಕೆ ಅಂತಿಮಗೊಂಡ ಬಳಿಕ ಅಭ್ಯರ್ಥಿ ಹೆಸರು ಘೋಷಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ದೇವೇಗೌಡರ ಜೊತೆ ಬುಧವಾರ ಮಾತುಕತೆ ನಡೆಸುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಸೀಟು ಹಂಚಿಕೆ ಬಗ್ಗೆ ಆದಷ್ಟು ಬೇಗ ತೀರ್ಮಾನ ಆಗಬೇಕು. ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಕಾಲಾವಕಾಶ ಬೇಕು. ಈ ಕಾರಣಕ್ಕೆ ಶೀಘ್ರದಲ್ಲೇ ಟಿಕೆಟ್ ಘೋಷಿಸಲು ತೀರ್ಮಾನಿಸಿದ್ದೇವೆ. ಪಕ್ಷದ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಚಾರದಲ್ಲಿ ಇನ್ನೂ ಚರ್ಚೆ ನಡೆದಿಲ್ಲ’ ಎಂದು ದಿನೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.