ADVERTISEMENT

ನಾವು ನಂಬಿಕಸ್ಥರು, ಅದಕ್ಕೆ ಜನ ವೋಟ್‌ ಹಾಕ್ತಾರೆ: ಸಚಿವ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 11:47 IST
Last Updated 27 ಅಕ್ಟೋಬರ್ 2021, 11:47 IST
ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ (ಎಡದಿಂದ) ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ ನರೇಂದ್ರಬಾಬು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅರುಣ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯ ರಘುನಾಥ ರಾವ್‌ ಮಲ್ಕಾಪುರೆ ಇದ್ದರು 
ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ (ಎಡದಿಂದ) ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ ನರೇಂದ್ರಬಾಬು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅರುಣ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯ ರಘುನಾಥ ರಾವ್‌ ಮಲ್ಕಾಪುರೆ ಇದ್ದರು    

ಬೆಂಗಳೂರು: ‘ನಾವು ನಂಬಿಕಸ್ಥರು ಎಂಬ ಕಾರಣಕ್ಕೇ ಜನ ನಮಗೆ ಚುನಾವಣೆಯಲ್ಲಿ ಮತ ಹಾಕುತ್ತಾರೆ. ದೇಶ ಮತ್ತು ಧರ್ಮವನ್ನು ಉಳಿಸುತ್ತಾರೆ ಎಂಬುದೇ ಜನರಿಗಿರುವ ನಂಬಿಕೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಬುಧವಾರ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುತ್ವವಾದಿಯಾಗಿದ್ದ ನಾನು ಹಿಂದೆ ಜಾತಿ ಸಂಘಟನೆಗಳಿಗೆ ಹೋಗುತ್ತಿರಲಿಲ್ಲ. ಜಾತಿ ಸಂಘಟನೆ ಮೂಲಕ ಹಿಂದುತ್ವ ಮತ್ತು ಹಿಂದೂ ಸಮಾಜ ಗಟ್ಟಿಯಾಗುತ್ತದೆ. ಜಾತಿ ಸಂಘಟನೆಯಿಂದ ಹಿಂದುಳಿದ ಜಾತಿಗಳು ಎಲ್ಲ ರೀತಿಯಿಂದಲೂ ಬಲಗೊಳ್ಳುತ್ತವೆ. ಸಣ್ಣ ಪುಟ್ಟ ಜಾತಿಗಳನ್ನು ಸಬಲಗೊಳಿಸುವುದು ನಮ್ಮ ಕರ್ತವ್ಯವೂ ಆಗಿದೆ. ಜಾತಿ ಸಂಘಟನೆಯಲ್ಲಿ ತೊಡಗುವುದು ಸಂಕುಚಿತ ಭಾವನೆಯೂ ಅಲ್ಲ. ಕುಟುಂಬ ಮತ್ತು ಜಾತಿಯ ಅಭಿವೃದ್ಧಿಯಿಂದ ಹಿಂದುತ್ವದ ಅಭಿವೃದ್ಧಿ ಸಾಧ್ಯ ’ ಎಂದು ಈಶ್ವರಪ್ಪ ತಿಳಿಸಿದರು.

ADVERTISEMENT

ಹಿಂದುಳಿದ ವರ್ಗಗಳಿಗೆ ಸೇರಿದ ಶೇ 80 ರಷ್ಟು ಜನ ಬಿಜೆಪಿಗೆ ಮತ ಹಾಕುತ್ತಾರೆ. ರಾಷ್ಟ್ರವಾದಿ ಮುಸ್ಲಿಮರು ಬಿಜೆಪಿಗೇ ಮತ ಹಾಕುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ ಎಂದರು.

ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ– ಪುಟ್ಟ ಜಾತಿಗಳ ಬೇಡಿಕೆಗಳನ್ನು ಆಲಿಸಿ ನಮಗೆ ತಿಳಿಸಿ, ಅದು ಹಾಸ್ಟೆಲ್‌, ಶಾಲಾ–ಕಾಲೇಜು ಆರಂಭಿಸುವ ವಿಚಾರ ಇರಬಹುದು, ಆ ವರ್ಗಗಳಿಗೆ ಸಹಾಯ ಮಾಡೋಣ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ಈ ಹಿಂದೆ ಆಡಳಿತ ನಡೆಸಿದಾಗ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿದ ಮಠಗಳಿಗೆ ₹100 ಕೋಟಿ ಅನುದಾನ ನೀಡಿತ್ತು. ಇದರಿಂದ ಆ ಸಮುದಾಯಗಳ ಮಠಗಳು ಶಿಕ್ಷಣ ಸಂಸ್ಥೆಗಳು ಹಾಸ್ಟೆಲ್‌, ಆಸ್ಪತ್ರೆ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿವೆ. ಆ ಬಳಿಕ ಬಂದ ಸರ್ಕಾರಗಳು ಈ ಮಠಗಳಿಗೆ ಒಂದು ಪೈಸೆಯೂ ಕೊಟ್ಟಿಲ್ಲ ಎಂದು ಕಿಡಿ ಕಾರಿದರು.

ನ.21 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಹಿಂದುಳಿದ ಸಮುದಾಯಗಳ ಸಮಾವೇಶ ಏರ್ಪಡಿಸಲಾಗುವುದು. ಇದರಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪಕ್ಷದ 8 ಜನ ಪ್ರಮುಖರು ಭಾಗವಹಿಸುವರು. ಹಿಂದುಳಿದ ಸಮಾಜಗಳ ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್‌ ಮಾಜಿ ಸದಸ್ಯರ ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ಮೋರ್ಚಾದ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.