ADVERTISEMENT

ಸಂಕೋಲೆಯಿಂದ ಪಾರಾದೆವು, ಅಖಂಡವಾಗಲಿಲ್ಲ: ಸ್ವಾತಂತ್ರ್ಯ ಹೋರಾಟಗಾರರ ನೋವು

ಎಂ.ಮಹೇಶ
Published 14 ಆಗಸ್ಟ್ 2020, 19:45 IST
Last Updated 14 ಆಗಸ್ಟ್ 2020, 19:45 IST
ವಿಠ್ಠಲರಾವ್ ಯಾಳಗಿ
ವಿಠ್ಠಲರಾವ್ ಯಾಳಗಿ   

ಬೆಳಗಾವಿ: ‘ನಾವೆಲ್ಲರೂ ದಾಸ್ಯದ ಸಂಕೋಲೆಯಿಂದ ಹೊರಬರಬೇಕು; ಸ್ವಾತಂತ್ರ್ಯ ಪಡೆಯಬೇಕು ಎಂಬ ಉದ್ದೇಶದಿಂದ ಸಾವಿರಾರು ಮಂದಿ ಚಳವಳಿಯಲ್ಲಿ ಪಾಲ್ಗೊಂಡು ತ್ಯಾಗ ಮಾಡಿದ್ದಾರೆ. ನಾವೂ ಪ್ರಾಣ ಪಣಕ್ಕಿಟ್ಟು ಹೋರಾಡಿದೆವು. ಸೆರೆವಾಸ ಅನುಭವಿಸಿದೆವು. ಆದರೆ, ಅಖಂಡ ಭಾರತದ ಕನಸು ನನಸಾಗಲಿಲ್ಲ’.

– ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ 94 ವರ್ಷದ ವಿಠ್ಠಲರಾವ ಯಾಳಗಿ ಅವರು ವಿಷಾದ ವ್ಯಕ್ತಪಡಿಸಿದ್ದು ಹೀಗೆ.

‘ನಮ್ಮಂತೆ ಲಕ್ಷಾಂತರ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ, ಅಖಂಡ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿಲ್ಲವಲ್ಲ ಎಂಬ ನೋವು ಈಗಲೂ ಕಾಡುತ್ತಿದೆ. ದೇಶವು ಎಷ್ಟು ಪ್ರಭಾವಶಾಲಿಯಾಗಿ ಬೆಳೆಯುಬೇಕಿತ್ತೋ ಅಷ್ಟು ಆಗಿಲ್ಲ. ಅಸಮಾನತೆ, ಬಡತನದಂತಹ ಸಮಸ್ಯೆಗಳು ನಿವಾರಣೆ ಆಗಿಲ್ಲ. ಭ್ರಷ್ಟಾಚಾರ ದೊಡ್ಡ ಶಾಪವಾಗಿ ಪರಿಣಮಿಸಿದೆ. ಎಲ್ಲರಿಗೂ ಎಲ್ಲ ಸೌಲಭ್ಯ ಹಾಗೂ ಅವಕಾಶಗಳು ಸುಲಭವಾಗಿ ಸಿಕ್ಕರೆ ನಮ್ಮಂತಹ ಹೋರಾಟಗಾರರಿಗೆ ನೆಮ್ಮದಿ ಸಿಕ್ಕೀತು’ ಎನ್ನುತ್ತಾರೆ ಅವರು.

ADVERTISEMENT

‘ಯೋಧರು ಗಡಿಯಲ್ಲಿ ಕಾದಾಡಿ ದೇಶ ಕಾಪಾಡುತ್ತಿದ್ದಾರೆ. ದೇಶದ ಒಳಗಿರುವವರು ಸ್ವಾತಂತ್ರ್ಯದ ಲಾಭ ಪಡೆದುಕೊಂಡು ಎಲ್ಲ ರಂಗದಲ್ಲೂ ಮುಂದೆ ಬರಬೇಕು. ದೇಶವು ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು’ ಎಂದು ಅನಿಸಿಕೆ ಹಂಚಿಕೊಂಡರು.

‘ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. 16 ಮಂದಿ ಸ್ವಾತಂತ್ರ್ಯ ಯೋಧರು ಸೇರಿ ಟಿಳಕವಾಡಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದ್ದೆವು. ಠಾಣೆಗೆ ಬಾಂಬ್‌ ಇಡುವುದು, ಅಂಚೆ ಕಚೇರಿ ಪೋಸ್ಟ್‌ ಬಾಕ್ಸ್‌ ಕಿತ್ತೊಗೆಯುವುದು... ಹೀಗೆ ಬ್ರಿಟಿಷರಿಗೆ ತೊಂದರೆ ಕೊಡುತ್ತಾ ಹೋರಾಡಿದ್ದೆವು. ಆಗ ನಮ್ಮನ್ನು ಬಂಧಿಸಿದ್ದ ಪೊಲೀಸರು, ಕ್ಯಾಂಪ್ ಠಾಣೆಯ ಚಿಕ್ಕ ಕೋಣೆಯಲ್ಲಿ 15 ದಿನ ಕೂಡಿಟ್ಟಿದ್ದರು. ಆ ಪರಿಸ್ಥಿತಿ ನರಕದಂತಿತ್ತು. ಬಳಿಕ ಹಿಂಡಲಗಾ ಜೈಲಿನಲ್ಲಿಟ್ಟಿದ್ದರು’ ಎಂದು ನೆನೆದರು.

‘ಬ್ರಿಟಿಷರನ್ನು ದೇಶ ಬಿಟ್ಟು ತೊಲಗುವಂತೆ ಮಾಡಲು ನಾವೆಲ್ಲರೂ ಹೋರಾಡಿದೆವು ನಿಜ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲೇ ಎಷ್ಟೋ ಚೆನ್ನಾಗಿತ್ತು ಎನಿಸುತ್ತದೆ. ಏಕೆಂದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶವು ಹಲವು ರಾಜ್ಯಗಳಾಗಿ ಛಿದ್ರವಾಯಿತು. ನಂತರದ ಪೀಳಿಗೆಯವರಲ್ಲಿ ದೇಶಾಭಿಮಾನ ಕಡಿಮೆ ಆಗುತ್ತಿರುವುದನ್ನೂ ಕಾಣುತ್ತಿದ್ದೇವೆ’ ಎಂದವರು ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ರಾಘವೇಂದ್ರ ಕಲಘಟಗಿ.

‘ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ಬಯಸಿದ ಗ್ರಾಮ ಸ್ವರಾಜ್ಯದ ಕನಸು ನನಸಾಗಿಲ್ಲ. ಇದಕ್ಕೆ ವಿಷಾದವಿದೆ. ನನಸಾಗಿಸಲು ಇಂದಿಗೂ ಬಹಳಷ್ಟು ಅವಕಾಶಗಳಿವೆ. ಸತ್ಯದ ಬದಲು ಅಸತ್ಯ, ಅಹಿಂಸೆಯ ಬದಲಿಗೆ ಹಿಂಸೆ ತಾಂಡವವಾಡುತ್ತಿದೆ. ಸ್ವದೇಶಿ ಚಿಂತನೆ ಕಡಿಮೆ ಆಗುತ್ತಿದೆ. ಸತ್ಯದಿಂದ ನಡೆಯುತ್ತೇವೆ ಎಂದು ಎಲ್ಲರೂ ಸಂಕಲ್ಪ ತೊಟ್ಟರೆ ದೇಶ ಸ್ವತಂತ್ರಗೊಂಡಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಸದಾಶಿವರಾವ್ ಭೋಸಲೆ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.