ADVERTISEMENT

ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ– ಡಿಕೆ ಶಿವಕುಮಾರ್

'ವಿರುದ್ಧ ವಿಧಾನ ಮಂಡಲ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ'

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 9:18 IST
Last Updated 25 ಜುಲೈ 2021, 9:18 IST
ಡಿಕೆ ಶಿವಕುಮಾರ್, ಪ್ರಜಾವಾಣಿ ಚಿತ್ರ
ಡಿಕೆ ಶಿವಕುಮಾರ್, ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ವಿಧಾನ ಮಂಡಲ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಭಾನುವಾರ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ, ಕೋವಿಡ್ ವಸ್ತುಸ್ಥಿತಿ, ಸರ್ಕಾರದ ವೈಫಲ್ಯ, ಸಾವು, ನೋವಿನ ಅಂಕಿಅಂಶ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡ 86 ಪುಟಗಳ ವರದಿಯನ್ನು ರಾಜ್ಯಸಭಾ ಸದಸ್ಯರೂ ಆಗಿರುವ ರಾಜ್ಯಮಟ್ಟದ ಕಾಂಗ್ರೆಸ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಎಲ್. ಹನುಮಂತಯ್ಯ ಅವರು ಶಿವಕುಮಾರ್‌ಗೆ ಸಲ್ಲಿಸಿದರು. ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ಕುರಿತು ಅಧ್ಯಯನ ನಡೆಸಲು ಕೆಪಿಸಿಸಿ ವತಿಯಿಂದ ಈ ಸಮಿತಿಯನ್ನು ರಚಿಸಲಾಗಿತ್ತು.

ADVERTISEMENT

‘ಕೋವಿಡ್ ಆರಂಭವಾದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡೆ. ವಲಸಿಗರಿಗೆ ರಕ್ಷಣೆ, ರೈತರಿಗೆ ಬೆಂಬಲವಾಗಿ ಪಕ್ಷದ ಕಾರ್ಯಕರ್ತರು ನಿಂತಿದ್ದಾರೆ. ಬೆಂಬಲ ಬೆಲೆ ಸಿಗದೆ ರೈತರು ಬೀದಿ ಪಾಲಾಗಿದ್ದರು. ಆಗ ರೈತರು ಬೆಳೆದಿದ್ದ ಬೆಳೆಯನ್ನು ನಾವೇ ಖರೀದಿಸಿದೆವು. ಸರ್ಕಾರದ ಮೇಲೆ ಒತ್ತಡ ತಂದು ಸರ್ವಪಕ್ಷ ಸಭೆ ಮಾಡಿಸಿದೆವು. ಸರ್ಕಾರದಿಂದ ಪರಿಹಾರವನ್ನೂ ಕೊಡಿಸಿದೆವು’ ಎಂದು ಶಿವಕುಮಾರ್‌ ಹೇಳಿದರು.

‘ವಲಸಿಗರು ಊರಿಗೆ ತೆರಳಲಾಗದೆ ರಸ್ತೆಯಲ್ಲೇ ಸತ್ತರು. ಅದರ ವಿರುದ್ಧ ಹೋರಾಟ ಮಾಡಿದೆವು. ನಮ್ಮ ಹೋರಾಟಕ್ಕೆ ಮಣಿದು ಸರ್ಕಾರ ಬಸ್ ವ್ಯವಸ್ಥೆ ಮಾಡಿತು. ಹಾಸಿಗೆ ಹಂಚಿಕೆಯಲ್ಲಿನ ಭ್ರಷ್ಟಾಚಾರ ವಿರುದ್ಧವೂ ಹೋರಾಟ ನಡೆಸಿದೆವು. ಎಲ್ಲವನ್ನೂ ಬಯಲಿಗೆ ಎಳೆದಿದೆವು. ಕೋವಿಡ್‌ನಿಂದ ಸತ್ತವರನ್ನು ಕೇಂದ್ರ, ರಾಜ್ಯ ಸರ್ಕಾರ ಹೇಗೆ ನಡೆಸಿಕೊಂಡಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಎರಡನೇ ಕೋವಿಡ್‌ ಅಲೆಯ ನಿಯಂತ್ರಿಸಲು ಸರ್ಕಾರ ಸಂಪೂರ್ಣ ಸರ್ಕಾರ ವಿಫಲವಾಯಿತು. ನಮ್ಮ‌ ಪಕ್ಷ ಜನರಿಗಾಗಿ ಹೋರಾಟ ನಡೆಸುತ್ತಿದೆ. ಈ ‌ಕ್ಷಣಕ್ಕೂ ನಮ್ಮ ಕಾರ್ಯಕರ್ತರು ವಾರಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಸರ್ಕಾರ ಮಾಡದ ಕೆಲಸವನ್ನು ನಮ್ಮ‌ ಪಕ್ಷ‌‌ ಮಾಡುತ್ತಿದೆ. ನಮ್ಮ‌ ಹೋರಾಟದ ಕಾರಣವೇ ಉಚಿತ‌ ಲಸಿಕೆ ಸಿಗುವಂತಾಯಿತು. ಚಾಮರಾಜನಗರ ಸಾವಿನ ವಿಷಯ ಮುಚ್ಚಿ ಹಾಕಲು ಹಾಸಿಗೆ ಹಗರಣವನ್ನು ತಂದರು’ ಎಂದೂ ಟೀಕಿಸಿದರು.

‘ಪ್ರವಾಹದಿಂದ ಹಾನಿಗೊಳಗಾದ ಸ್ಥಳಗಳ ವೀಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೋಗಿರುವುದು ಸಂತೋಷದ ವಿಷಯ. ಆದರೆ, ಯಡಿಯೂರಪ್ಪ ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಾರೊ, ಏನಾಗುತ್ತಾರೊ ಗೊತ್ತಿಲ್ಲ. ಆದರೂ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಕಳೆದ ಬಾರಿ ಪ್ರವಾಹದಿಂದ ಆಸ್ತಿಪಾಸ್ತಿ ನಷ್ಟ ಆದವರಿಗೆ ಈವರೆಗೂ ಸರ್ಕಾರ ಏನು ಮಾಡಿಲ್ಲ. ಹಾಗಾದರೆ ಈ ಬಿಜೆಪಿ ಸರ್ಕಾರ ಯಾಕೆ ಇರಬೇಕು. ಚುನಾವಣೆ ಎದುರಿಸೋಣ. ಜನರು ಏನು ತೀರ್ಮಾನ ಕೊಡುತ್ತಾರೋ ನೋಡೋಣ’ ಎಂದು ಸವಾಲು ಹಾಕಿದರು.

‘ಈ ಹಿಂದೆ ಪ್ರವಾಹ ಹಿನ್ನೆಲೆಯಲ್ಲಿ ಪ್ರಧಾನಿ ಬೇರೆಬೇರೆ ರಾಜ್ಯಗಳೀಗೆ ಹೋಗಿದ್ದರು. ಯಾಕೆ ನಮ್ಮ ರಾಜ್ಯಕ್ಕೆ ಬರಲಿಲ್ಲ. ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ರೀತಿ ನಡೆದುಕೊಳ್ಳುತ್ತಿದೆ. ಗುಜರಾತ್‌ ರಾಜ್ಯಕ್ಕೆ ಎಷ್ಟು ಲಸಿಕೆ ಕೊಟ್ಟಿದ್ದಾರೆ. ಕರ್ನಾಟಕ್ಕೆ ಎಷ್ಟು ಲಸಿಕೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.