ADVERTISEMENT

ಬಿ.ಸಿ.ಎಂ ಹಾಸ್ಟೆಲ್‌ಗಳಲ್ಲಿ ಶೇ 25ರಷ್ಟು ಹೆಚ್ಚುವರಿ ಸ್ಥಾನ–ಸಚಿವ ಕೋಟ ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 12:33 IST
Last Updated 9 ಆಗಸ್ಟ್ 2022, 12:33 IST
ಸಚಿವ ಕೋಟ ಶ್ರೀನಿವಾಸ
ಸಚಿವ ಕೋಟ ಶ್ರೀನಿವಾಸ   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ‘ರಾಜ್ಯದ ಬಿ.ಸಿ.ಎಂ ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿಯಾಗಿ ಶೇ. 25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಈ ಕುರಿತು ಎರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪಟ್ಟಣದಲ್ಲಿ ಜಿಲ್ಲಾ ಬಿಜೆಪಿಯಿಂದ ಮಂಗಳವಾರ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ‘ವಿದ್ಯಾಸಿರಿ’ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆ ಪೈಕಿ ಸ್ಥಳಾವಕಾಶ ಲಭ್ಯವಿರುವ ಕಡೆಗೆ 21 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಪ್ರವೇಶ ಕೊಡಲಾಗುವುದು ಎಂದು ತಿಳಿಸಿದರು.

ADVERTISEMENT

ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್, ಡಾ.ಬಿ.ಆರ್.ಅಂಬೇಡ್ಕರ್‌ ಹೆಸರಿನಲ್ಲಿ 100 ಹಾಸ್ಟೆಲ್, ದೀನ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಶೈಕ್ಷಣಿಕ ಕೇಂದ್ರಗಳೆಂದು ಹೆಗ್ಗಳಿಕೆ ಗಳಿಸಿರುವ ಬೆಳಗಾವಿ, ಧಾರವಾಡ, ಶಿವಮೊಗ್ಗ, ಮೈಸೂರು, ಕಲಬುರಗಿಯಲ್ಲಿ ತಲಾ ಒಂದು ಸಾವಿರ ವಿದ್ಯಾರ್ಥಿಗಳಿಗೆ ‘ಸಾಮರ್ಥ್ಯ’ ವಿದ್ಯಾರ್ಥಿ ನಿಲಯ ಆರಂಭಿಸಲಾಗುವುದು ಎಂದು ವಿವರಿಸಿದರು.

ಮಂಗಳೂರಿನಲ್ಲಿ ಈಗಾಗಲೇ 500 ವಿದ್ಯಾರ್ಥಿಗಳ ದೀನ ದಯಾಳ್ ಉಪಾಧ್ಯಾಯ ಹಾಸ್ಟೆಲ್ ಆರಂಭವಾಗಿದೆ. ಹಂತ ಹಂತವಾಗಿ ಎಲ್ಲ ಕಡೆಗೂ ಹಾಸ್ಟೆಲ್ ಆರಂಭಿಸಲಾಗುವುದು. ಮೀಸಲಾತಿ ಅನ್ವಯ ಎಲ್ಲ ವರ್ಗದವರಿಗೂ ಪ್ರವೇಶ ಕಲ್ಪಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಸ್ಟೆಲ್ ಆಯ್ಕೆಗೆ ಕೌನ್ಸೆಲಿಂಗ್ ಮಾಡಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗಲ್ಲ.

ಗಂಗಾಕಲ್ಯಾಣ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 60 ಕೊಳವೆಬಾವಿ ಕೊರೆಸಲಾಗುತ್ತಿದೆ. ರೈತರು, ಕೊಳವೆಬಾವಿ ಕೊರೆದ ಮಾಲೀಕರ ಜಂಟಿ ಖಾತೆಗೆ ನೇರವಾಗಿ ಹಣ ಪಾವತಿಸುವ ಪದ್ಧತಿ ಆರಂಭಿಸಲಾಗಿದೆ. ಈಗಾಗಲೇ ಗುತ್ತಿಗೆ ಕೊಡಲಾಗಿದ್ದು 5 ಸಾವಿರ ಕೊಳವೆ ಬಾವಿ ಕೊರೆದಿದ್ದಾರೆ. ಇನ್ನುಳಿದ 10 ಸಾವಿರ ಕೊಳವೆಬಾವಿ ಹಂತ ಹಂತವಾಗಿ ಕೊರೆಸಲಾಗುವುದು ಎಂದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಶಿಕ್ಷಕರು ಸಚಿವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.