ADVERTISEMENT

ಕುಣಿಗಲ್ ತಾಲ್ಲೂಕಿಗೆ ಅನ್ಯಾಯವಾಗಲು ಬಿಡಲ್ಲ: ಶಾಸಕ ಎಚ್.ಡಿ. ರಂಗನಾಥ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 16:17 IST
Last Updated 3 ಜೂನ್ 2025, 16:17 IST
   

ಬೆಂಗಳೂರು: ‘ಕುಣಿಗಲ್ ತಾಲ್ಲೂಕಿನ ಪಾಲಿನ ಹೇಮಾವತಿ ನೀರನ್ನು ಕೊಂಡೊಯ್ಯಲು ಲಿಂಕ್ ಕೆನಾಲ್ ಯೋಜನೆ ರೂಪಿಸಲಾಗಿದೆ. ಇದರಿಂದ ಬೇರೆ ತಾಲ್ಲೂಕುಗಳಿಗೆ ಅನ್ಯಾಯ ಆಗುವುದಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ’ ಎಂದು ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್  ಹೇಳಿದರು.

ಬಸವೇಶ್ವರನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ರಂಗನಾಥ್, ‘ತುಮಕೂರಿನ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿಚಾರವಾಗಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದರು.

‘ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆಗೆ ಸೇರಿಲ್ಲವೇ? ಇಲ್ಲಿನ ರೈತರೂ ಬದುಕಬಾರದೇ ಎಂಬ ಪ್ರಶ್ನೆಯನ್ನು ತುಮಕೂರಿನ ರೈತರು ಹಾಗೂ ಸಂಘಟನೆ ನಾಯಕರಿಗೆ ಕೇಳುತ್ತೇನೆ. ನಮಗೆ ನೀರು ಕೊಡಲು ಇಷ್ಟವಿಲ್ಲದಿದ್ದರೆ ಅದನ್ನು ನೇರವಾಗಿ ಹೇಳಿ. ಮುಂದೆ ನೀರು ಕೊಡುತ್ತೇವೆ ಎಂದು ಹೇಳಿ ಆನಂತರ ಅಡ್ಡಿ ಮಾಡುವುದು ಬೇಡ’ ಎಂದರು.

ADVERTISEMENT

‘ಕುಣಿಗಲ್‌ ತಾಲ್ಲೂಕಿನ ಪಾಲಿನ ನೀರನ್ನು ಪೈಪ್‌ಲೈನ್ ಮೂಲಕ ರಾಂಪುರ ಗೇಟ್‌ನಿಂದ ಗುಬ್ಬಿ ಹಾಗೂ ಕುಣಿಗಲ್ ತಾಲ್ಲೂಕು ಗಡಿವರೆಗೆ 34 ಕಿ.ಮೀ. ತೆಗೆದುಕೊಂಡು ಹೋಗಲಾಗುತ್ತಿದೆ. ಈ ಯೋಜನೆ ಕುಣಿಗಲ್ ತಾಲ್ಲೂಕಿನ ಜನರಿಗೆ ಮಾತ್ರ. ಈ ಯೋಜನೆ ವಿಚಾರವಾಗಿ ಅನುಮಾನ ಇದ್ದರೆ ಎಲ್ಲಿಗೆ ಕರೆದರೂ ನಾನು ಹೋಗಿ ಸ್ಪಷ್ಟನೆ ನೀಡುತ್ತೇನೆ. ರಾಜಕೀಯ ನಾಯಕರ ಪ್ರಚೋದನೆಗೆ ರೈತರು ಒಳಗಾಗಬಾರದು. ನಿಮ್ಮ ಪ್ರಶ್ನೆ ಏನೇ ಇದ್ದರೂ ನಾನು ಉತ್ತರಿಸುತ್ತೇನೆ. ಎಲ್ಲಾ ತಾಲ್ಲೂಕುಗಳಿಗೆ ನಿಗದಿಯಾಗಿರುವ ನೀರು ಕೊಡಿಸಲು ನಮ್ಮ ಸರ್ಕಾರ ಬದ್ಧವಿದೆ. ಅದೇ ರೀತಿ ಕುಣಿಗಲ್ ತಾಲ್ಲೂಕಿಗೆ ನ್ಯಾಯ ಒದಗಿಸಿಕೊಡುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ’ ಎಂದರು.

‘ನಾನು ಪ್ರೀತಿಗೆ ತಲೆಬಾಗುತ್ತೇನೆಯೇ ಹೊರತು ಗೊಡ್ಡು ಬೆದರಿಕೆಗಳಿಗಲ್ಲ. ಶಾಸಕರಾದ ಸುರೇಶ್ ಗೌಡ, ಎಚ್‌.ಡಿ. ಕೃಷ್ಣಪ್ಪ, ಜ್ಯೋತಿ ಗಣೇಶ್ ಅವರ ಒತ್ತಾಯದ ಮೇರೆಗೆ ತಾಂತ್ರಿಕ ಸಮಿತಿ ರಚಿಸಲಿಲ್ಲವೇ? ಆ ತಾಂತ್ರಿಕ ಸಮಿತಿ ವರದಿ ಮೇಲೆ ಈ ಯೋಜನೆ ಮಾಡುತ್ತಿರುವುದಲ್ಲವೇ? ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿ, ಪರಮೇಶ್ವರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಒಂದೇ ಒಂದು ತಾಲೂಕಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಹೋರಾಟದಲ್ಲಿ ಭಾಗವಹಿಸಿದ ಸ್ವಾಮೀಜಿಗಳ ಮಠಕ್ಕೆ ಹೋಗಿ ಎಲ್ಲ ವಿಚಾರಗಳನ್ನು ವಿವರಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.