ADVERTISEMENT

ಕೈಗಾರಿಕಾ ನಿವೇಶನ ಅನ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:28 IST
Last Updated 11 ಸೆಪ್ಟೆಂಬರ್ 2019, 12:28 IST

ಬೆಳಗಾವಿ: ‘ಕೈಗಾರಿಕೆ ಸ್ಥಾಪಿಸುವುದಾಗಿ ನಿವೇಶನ ಪಡೆದು ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದರೆ ಅಥವಾ ಬೇರೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಂಕಿ–ಅಂಶ ಸಮೇತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

‘ಕೈಗಾರಿಕಾ ಉದ್ದೇಶಕ್ಕೆಂದು ಜಾಗ ಪಡೆದು ದುರ್ಬಳಕೆ ಮಾಡಿಕೊಳ್ಳುವುದು ರಿಯಲ್‌ ಎಸ್ಟೇಟ್ ವ್ಯವಹಾರದಂತೆ ಆಗಬಾರದು. ಇದಕ್ಕಾಗಿ, ರಾಜ್ಯದಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸ್ಥಿತಿಗತಿ ಅವಲೋಕಿಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕಾ ಅದಾಲತ್ ಮತ್ತು ಸಮಾಲೋಚನಾ ಸಭೆಗಳನ್ನು ನಡೆಸಿ, ಉದ್ಯಮಿಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುತ್ತೇನೆ. ಕೈಗಾರಿಕೆಗಳು ಬೆಂಗಳೂರು ಕೇಂದ್ರಿತವಾಗದಂತೆ ನೋಡಿಕೊಳ್ಳಲಾಗುವುದು. ಉತ್ತರ ಕರ್ನಾಟಕ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸಲಾಗುವುದು. ಮುಂಬೈ–ಚೆನ್ನೈ ಕೈಗಾರಿಕಾ ಕಾರಿಡಾರ್‌ಗೆ ಕೇಂದ್ರವೂ ಪ್ರೋತ್ಸಾಹ ಕೊಡುತ್ತಿದೆ. ಇದನ್ನು ಬಳಸಿಕೊಂದು ಬೆಳಗಾವಿ, ಹುಬ್ಬಳ್ಳಿ–ಧಾರವಾಡಯಂತಹ 2ನೇ ಹಂತದ ನಗರಗಳಿಗೆ ಹೆಚ್ಚಿನ ಉದ್ಯಮಗಳು ಬರುವಂತೆ ಮಾಡಲಾಗುವುದು. ಭೂ ಬ್ಯಾಂಕ್‌ ಸ್ಥಾಪಿಸಲಾಗುವುದು’ ಎಂದರು.

ADVERTISEMENT

ಇದಕ್ಕೂ ಮುನ್ನ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.