ADVERTISEMENT

ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಮನವಿ: ಸೂಕ್ತ ಸಮಯದಲ್ಲಿ ನಿರ್ಣಯ– ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 11:18 IST
Last Updated 10 ಅಕ್ಟೋಬರ್ 2022, 11:18 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಒಕ್ಕಲಿಗ ಸಮುದಾಯವೂ ಸೇರಿ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಎಲ್ಲ ಮನವಿಗಳನ್ನು ಗೌರವಯುತವಾಗಿ ಸ್ವೀಕರಿಸಿದ್ದು, ಪರಿಶೀಲನೆ ನಡೆಸಿ ಸೂಕ್ತ ಸಮಯದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 10 ಕ್ಕೆ ಏರಿಸಬೇಕು ಎಂಬ ಬೇಡಿಕೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಎಸ್‌ಸಿ ಮತ್ತು ಎಸ್‌ಟಿಗಳ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಇದಕ್ಕೆ ಆಯೋಗ ಮತ್ತು ಸಮಿತಿಯನ್ನು ರಚಿಸಲಾಗಿತ್ತು. ಅವುಗಳ ಶಿಫಾರಸ್ಸಿನಂತೆ ನಡೆದುಕೊಂಡಿದ್ದೇವೆ. ನಾನೀಗ ಯಾವುದೇ ಒಂದು ಜಾತಿ ಅಥವಾ ಸಮುದಾಯದ ನಾಯಕನಲ್ಲ. ಎಲ್ಲ ಸಮುದಾಯವನ್ನು ಒಂದೇ ರೀತಿ ನೋಡಿಕೊಳ್ಳಬೇಕು. ಬೊಮ್ಮಾಯಿ ಅವರು ಲಿಂಗಾಯತ, ಆದರೂ ಅವರು ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಲಿಂಗಾಯತರು, ಒಕ್ಕಲಿಗರು, ಈಡಿಗರೂ ಸೇರಿ ಹಲವು ಸಮುದಾಯದವರು ಮೀಸಲಾತಿ ಪ್ರಮಾಣಕ್ಕೆ ಮನವಿ ಕೊಟ್ಟಿದ್ದಾರೆ ಎಂದರು.

ರಾಜ್ಯ ಪ್ರವಾಸ:

ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ಪ್ರವಾಸಕ್ಕೆ ಸಂಬಂಧಿಸಿದಂತೆ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಅವರು ದೂರವಾಣಿ ಕರೆ ಮಾಡಿದ್ದರು. ಯಾವ ನಾಯಕರು ಎಲ್ಲೆಲ್ಲಿ ಹೋಗಬೇಕು ಎಂಬ ಬಗ್ಗೆ ಪಟ್ಟಿ ಮಾಡಿದ್ದಾರೆ. ಅದರ ಪ್ರಕಾರವೇ ನಾಯಕರ ಪ್ರವಾಸ ನಡೆಸಲಿದ್ದಾರೆ. ನಾನೂ ಕೂಡ ಹಲವು ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.