ಸುವರ್ಣ ವಿಧಾನಸೌಧ (ಬೆಳಗಾವಿ): ಕಾಲುವೆಗೆ ಹರಿಸಿದ ನೀರನ್ನು ಬಳಸಿಕೊಂಡಿರುವುದಕ್ಕಾಗಿ ₹70.31 ಲಕ್ಷ ವಿದ್ಯುತ್ ಶುಲ್ಕ ಪಾವತಿಸುವಂತೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನೀಡಿರುವ ನೋಟಿಸ್ ಅನ್ನು ಹಿಂಪಡೆಯಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಸಿದ್ಧಗಂಗಾ ಮಠವು ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಮಠವು ನೀರು ಬಳಸಿಕೊಂಡಿದೆ ಎಂಬ ಕಾರಣಕ್ಕೆ ಶುಲ್ಕ ಪಾವತಿಗೆ ಸೂಚಿಸಿರುವುದು ಸರಿಯಲ್ಲ. ನೋಟಿಸ್ ಹಿಂಪಡೆಯುವಂತೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.
‘ಕೆಐಎಡಿಬಿಯಿಂದ ನಿರ್ಮಿಸಿದ ಕಾಲುವೆಗೆ ಹರಿಸಿದ ನೀರನ್ನು ಬಳಸಿಕೊಳ್ಳಲಾಗಿತ್ತು ಎಂಬ ಕಾರಣಕ್ಕಾಗಿ ಏಪ್ರಿಲ್ ತಿಂಗಳಲ್ಲೇ ಸಿದ್ಧಗಂಗಾ ಮಠಕ್ಕೆ ನೋಟಿಸ್ ನೀಡಲಾಗಿತ್ತು. ಮಠವು ನೀರು ಬಳಸಿಕೊಳ್ಳದಿದ್ದರೂ ನೋಟಿಸ್ ನೀಡಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
‘ಸಿದ್ಧಗಂಗಾ ಮಠದ ಸ್ವಾಮೀಜಿಯವರ ಜೊತೆ ಕೆಐಎಡಿಬಿಯ ಮುಖ್ಯ ಎಂಜಿನಿಯರ್ ಅವರು ಈಗಾಗಲೇ ಮಾತನಾಡಿದ್ದಾರೆ. ನಾನು ಕೂಡ ಚರ್ಚಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.