ADVERTISEMENT

ಸಾಲ ನೀಡದ ಡಿಸಿಸಿ ಬ್ಯಾಂಕ್‌: ಅಸಂಖ್ಯ ನೇಕಾರರಿಗಿಲ್ಲ ‘ಸಾಲ ಮನ್ನಾ’ ಭಾಗ್ಯ!

ಸರ್ಕಾರದ ಮಧ್ಯ ಪ್ರವೇಶಕ್ಕೆ ಒತ್ತಾಯ l ಸಹಕಾರ ಬ್ಯಾಂಕ್‌ಗಳ ಧೋರಣೆಗೆ ತೀವ್ರ ಆಕ್ಷೇಪ

ಕೊಂಡ್ಲಹಳ್ಳಿ ಜಯಪ್ರಕಾಶ
Published 31 ಆಗಸ್ಟ್ 2019, 19:43 IST
Last Updated 31 ಆಗಸ್ಟ್ 2019, 19:43 IST
ನೇಕಾರರಿಗೆ ಸಾಲ ನೀಡಲು ವಿಫಲವಾಗಿರುವ ಮೊಳಕಾಲ್ಮುರು ತಾಲ್ಲೂಕಿನ ವಿಎಸ್ಎಸ್ಎನ್ ಬ್ಯಾಂಕ್.
ನೇಕಾರರಿಗೆ ಸಾಲ ನೀಡಲು ವಿಫಲವಾಗಿರುವ ಮೊಳಕಾಲ್ಮುರು ತಾಲ್ಲೂಕಿನ ವಿಎಸ್ಎಸ್ಎನ್ ಬ್ಯಾಂಕ್.   

ಮೊಳಕಾಲ್ಮುರು: ರಾಜ್ಯದ ಹಾಲಿ ಬಿಜೆಪಿ ಸರ್ಕಾರ ಹಾಗೂ ಹಿಂದಿನ ಸರ್ಕಾರಗಳು ಮಾಡಿರುವ ನೇಕಾರರ ಸಾಲಮನ್ನಾ ಸೌಲಭ್ಯ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದೆ. ಸಾವಿರಾರು ನೇಕಾರರು ಸೌಲಭ್ಯ ವಂಚಿತರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

2010ರ ನಂತರ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಕಾರರ ಸಾಲಮನ್ನಾ ಮಾಡಲಾಗಿದೆ. ರೇಷ್ಮೆ, ಕಂಬಳಿ, ಕೈಮಗ್ಗ ಹಾಗೂ ವಿದ್ಯುತ್‌ ಮಗ್ಗದ ನೇಕಾರರು ಇದರ ಫಲಾನುಭವಿಗಳಾಗಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ಗಳು, ಸಹಕಾರ ಪತ್ತಿನ ಬ್ಯಾಂಕ್‌ಗಳು ನೇಕಾರರಿಗೆ ಸಾಲ ನೀಡದಿರುವುದೇ ಸೌಲಭ‍್ಯ ವಂಚಿತರಾಗಲು ಕಾರಣ ಎಂಬುದು ನೇಕಾರರ ಅಳಲು.

ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ಗಳು ಸತತವಾಗಿ ನೇಕಾರರಿಗೆ ಸಾಲವನ್ನೇ ನೀಡಿಲ್ಲ. ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ಗಳು ನೇಕಾರರಿಗೆ ಸಾಲ ನೀಡಿವೆ. ಹೀಗಾಗಿ ಸಾಲಮನ್ನಾ ಸೌಲಭ್ಯ ಈ ಜಿಲ್ಲೆಗಳಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ ಎಂದು ದೂರುತ್ತಾರೆ ನೇಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಸೂರನಹಳ್ಳಿ ಕೆ.ಜಗದೀಶ್.

ADVERTISEMENT

‘ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೈಮಗ್ಗ, ವಿದ್ಯುತ್ ಮಗ್ಗದ 7 ಲಕ್ಷ ನೇಕಾರರಿದ್ದಾರೆ. ಇವರಲ್ಲಿ ನೇಕಾರರ ಕ್ರೆಡಿಟ್ ಕಾರ್ಡ್, ಮುದ್ರಾ ಯೋಜನೆಯ ಅಡಿ ಕನಿಷ್ಠ 50 ಸಾವಿರ ಮಂದಿ ಸಾಲ ಪಡೆದಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯ ಕೊನೆಯಲ್ಲಿ ನೇಕಾರರ ₹ 53 ಕೋಟಿ ಸಾಲಮನ್ನಾಕ್ಕೆ ಆದೇಶ ಮಾಡಲಾಯಿತು. ಆದರೆ, ಅನುಷ್ಠಾನವಾಗಲಿಲ್ಲ. ಇದಕ್ಕೆ ₹ 47 ಕೋಟಿ ಸೇರಿಸಿ ಯಡಿಯೂರಪ್ಪ ಅವರು ₹ 100 ಕೋಟಿ ಸಾಲ ಮನ್ನಾ ಮಾಡಿದ್ದಾರೆ.

ಇದೂ ಸಹ 3-4 ಜಿಲ್ಲೆಗಳಿಗೆ ಸೀಮಿತವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2,457 ನೇಕಾರರು ಸಾಲ ಪಡೆದಿದ್ದರೂ ಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್ ಹೇಳಿದರು.

‘ಅನೇಕ ಬಾರಿ ನಿಯೋಗ ತೆರಳಿ ನೇಕಾರರಿಗೆ ರೈತರ ರೀತಿ ಸಾಲ ನೀಡಿ ಎಂದುಡಿಸಿಸಿ ಬ್ಯಾಂಕ್‌ಗೆ ಮನವಿ ಮಾಡಿದ್ದೇವೆ. ಆದರೆ, ‘ಶ್ಯೂರಿಟಿ ಸಿಗಲ್ಲ’ ಎಂದು ನಿರಾಕರಿಸಲಾಗಿದೆ. ಇದರಿಂದ ಸಾಲ ಪಡೆಯುವುದೂ ಕಷ್ಟ, ಮನ್ನಾ ಸೌಲಭ್ಯವೂ ಇಲ್ಲ. ಕೂಡಲೇ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಡೆದ ಸಾಲಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು. ಜತೆಗೆ ಮುಂದಿನ ದಿನಗಳಲ್ಲಿ ನೇಕಾರರಿಗೆ ಕಡ್ಡಾಯವಾಗಿ ಸಾಲ ನೀಡುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು’ ಎಂದು ಆಗ್ರಹಪಡಿಸಿದರು.

‘ಹಿಂದೆ ಯಡಿಯೂರಪ್ಪ ರಾಷ್ಟ್ರೀಕೃತ ಬ್ಯಾಂಕ್ ಸಾಲಗಾರರ ಪಟ್ಟಿ ನೀಡುವಂತೆಯೂ ಸೂಚಿಸಿದ್ದರು’ ಎಂದು ನೇಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎಸ್.ಕೆ.ಗುರುಲಿಂಗಪ್ಪ ಸ್ಮರಿಸಿದರು.

ರಾಜಕೀಯ ಪ್ರಚಾರಕ್ಕೆ ಸೀಮಿತ

‘ರೈತರು ಮತ್ತು ನೇಕಾರರು ಎರಡು ಕಣ್ಣುಗಳಿದ್ದಂತೆ ಎಂದು ಸರ್ಕಾರ ಹೇಳುತ್ತದೆ. ಡಿಸಿಸಿ ಬ್ಯಾಂಕ್ ಕಾರ್ಯವೈಖರಿ ಮತ್ತು ಸಾಲಮನ್ನಾ ಮಾನದಂಡ ಇದನ್ನು ಅಣಕಿಸುವಂತಿವೆ. ಇದನ್ನು ಸರಿಪಡಿಸದೇ ಇದ್ದರೆ ನೇಕಾರ ಸಾಲಮನ್ನಾ ಯೋಜನೆ ರಾಜಕೀಯ ಪ್ರಚಾರಕ್ಕೆ ಸೀಮಿತವಾಗಲಿದೆ’ ಎಂಬುದು ನೇಕಾರರ ಅನಿಸಿಕೆ.

**

ಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಡೆದಿರುವ ಸಾಲ ಮನ್ನಾಕ್ಕೂ ಆದೇಶ ನೀಡಬೇಕು. ಇಲ್ಲವಾದಲ್ಲಿ ನೇಕಾರರ ಸಾಲಮನ್ನಾದ ಉದ್ದೇಶ ಈಡೇರುವುದಿಲ್ಲ.
- ಗೋ.ತಿಪ್ಪೇಶ್, ಕೆಎಚ್‌ಡಿಸಿ ಮಾಜಿ ಅಧ‍್ಯಕ್ಷ

**

ಶ್ಯೂರಿಟಿ ನೆಪದಿಂದ ಡಿಸಿಸಿ ಬ್ಯಾಂಕ್‌ಗಳು ಸಾಲ ನಿರಾಕರಿಸುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಡಿಸಿಸಿ ಬ್ಯಾಂಕ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು.
- ಸೂರನಹಳ್ಳಿ ಜಗದೀಶ್,ಚಳ್ಳಕೆರೆ

**

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಷ್ಟು ನೇಕಾರರು ಸಾಲ ಪಡೆದಿದ್ದಾರೆ ಎಂಬ ವಿವರಗಳನ್ನು ಸರ್ಕಾರ ಕೇಳಿಲ್ಲ. ನಮ್ಮ ಬಳಿ ಈ ಬಗ್ಗೆ ಮಾಹಿತಿಗಳು ಇಲ್ಲ.
- ಎನ್‌.ಟಿ. ನೇಗಳೂರು, ಉಪನಿರ್ದೇಶಕ, ಜವಳಿ ಇಲಾಖೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.