ADVERTISEMENT

ಸಚಿವರಿಗೆ ಸ್ವಪ‍ಕ್ಷೀಯರಿಂದಲೇ ಮುಜುಗರ

ವಿಧಾನಸಭೆಯಲ್ಲಿ ನೇಕಾರರ ಸಮಸ್ಯೆ ಕುರಿತ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 22:15 IST
Last Updated 17 ಮಾರ್ಚ್ 2021, 22:15 IST
ವಿಧಾನಸಭೆಯಲ್ಲಿ ಸಚಿವರ ಮಾತುಕತೆ
ವಿಧಾನಸಭೆಯಲ್ಲಿ ಸಚಿವರ ಮಾತುಕತೆ   

ಬೆಂಗಳೂರು: ನೇಕಾರರ ಸಮಸ್ಯೆ ಕುರಿತು ಆಡಳಿತ ಪಕ್ಷದ ಸದಸ್ಯರೇ ಪದೇ ಪದೇ ಪ್ರಶ್ನೆಗಳನ್ನು ಕೇಳುವ ಮೂಲಕ ಜವಳಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಮುಜುಗರ ತಂದ ವಿದ್ಯಮಾನ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಿದ್ದು ಸವದಿ, ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರು. ’ನೇಕಾರ ಸಮ್ಮಾನ್‌ ಯೋಜನೆಯಡಿ ನೀಡಿದ ₹2 ಸಾವಿರ ಯಾವುದಕ್ಕೂ ಸಾಲದು. ಲಾಕ್‌ಡೌನ್‌ ಅವಧಿಯಲ್ಲಿ ನೇಕಾರರು ತಯಾರಿಸಿದ ಸೀರೆಗಳನ್ನು ಇಲಾಖೆ ಖರೀದಿ ಮಾಡಿಲ್ಲ. ನೇಕಾರರ ಸಾಲ ಮನ್ನಾ ಯೋಜನೆಯೂ ಸಂಪೂರ್ಣ ಅನುಷ್ಠಾನಗೊಂಡಿಲ್ಲ‘‍ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿಯ ಮಹಾದೇವಪ್ಪ ಯಾದವಾಡ ಧ್ವನಿಗೂಡಿಸಿದರು.

’ಹಣಕಾಸು ಇಲಾಖೆ ಒಪ್ಪಿಗೆ ನೀಡದ ಕಾರಣ ಸೀರೆ ಖರೀದಿ ಮಾಡಲು ಸಾಧ್ಯವಾಗಲಿಲ್ಲ‘ ಎಂದು ಸಚಿವರು ಸಮಜಾಯಿಷಿ ನೀಡಿದರು.

ADVERTISEMENT

ಬಿಜೆಪಿಯ ಗೂಳಿಹಟ್ಟಿ ಶೇಖರ್‌, ’ವಿದ್ಯಾ ವಿಕಾಸ ಯೋಜನೆಗೆ ಜವಳಿ ಇಲಾಖೆಯಿಂದಲೇ ಸಮವಸ್ತ್ರಗಳನ್ನು ಖರೀದಿ ಮಾಡಬೇಕಿತ್ತು‘ ಎಂದರು. ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿಜೆಪಿಯ ಅಭಯ ಪಾಟೀಲ, ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್‌, ಟಿ. ವೆಂಕಟರಮಣಪ್ಪ ಧ್ವನಿಗೂಡಿಸಿದರು. ’ನೇಕಾರರಿಂದಲೇ ಸಮವಸ್ತ್ರ ಖರೀದಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನಕ್ಕೆ ತಮಿಳುನಾಡಿಗೆ ಅಧಿಕಾರಿಗಳ ತಂಡ ಕಳುಹಿಸಲಾಗಿದೆ‘ ಎಂದು ಸಚಿವರು ಉತ್ತರಿಸಿದರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಸಿದ್ದು ಸವದಿ ಅವರು ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತೆ ಪ್ರಸ್ತಾಪಿಸಿದರು. ಸರ್ಕಾರದ ಧೋರಣೆಗೆ ಚಾಟಿ ಬೀಸಿದರು. ಇಲಾಖೆಯ ಅಧೀನದ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ, ಅಲ್ಲಿನ ನೌಕರರಿಗೆ ₹60 ಸಾವಿರ ಸಂಬಳ ನೀಡಲಾಗುತ್ತಿದೆ. ನೇಕಾರರಿಗೆ ₹3 ಸಾವಿರ ಕೊಡಲಾಗುತ್ತಿದೆ. ನಿಗಮಗಳ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಹಣವಿಲ್ಲದ ಪರಿಸ್ಥಿತಿ ಇದೆ ಎಂದು ಹೇಳಿದರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಸರ್ಕಾರವನ್ನು ಸಮರ್ಥಿಸಿ ಮಾತನಾಡಬೇಕು ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಆನಂದ ಮಾಮನಿ ಕಿವಿಮಾತು ಹೇಳಿದರು.

’ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ನಮ್ಮ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ, ಸಮಸ್ಯೆಗಳನ್ನು ಹೇಳಬೇಕಲ್ಲ‘ ಎಂದು ಸಿದ್ದು ಸವದಿ ಹೇಳಿದರು.

ಬಿಜೆಪಿಯ ದೊಡ್ಡನಗೌಡ ಪಾಟೀಲ, ’ನಮ್ಮ ಮನೆಯ ದೀಪ ಎಂದು ಅದಕ್ಕೆ ಮುತ್ತು ಕೊಡಲು ಆಗುತ್ತದೆಯೇ. ಮುತ್ತು ಕೊಟ್ಟರೆ ಮುಖ ಸುಟ್ಟು ಹೋಗುತ್ತದೆ‘ ಎಂದು ಮಾರ್ಮಿಕವಾಗಿ ಹೇಳಿದರು.

ಬಿಜೆಪಿಯ ಅಪ್ಪಚ್ಚು ರಂಜನ್‌, ’ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ
ಇಲಾಖೆ ಮೂಲಕ ಸೀರೆಗಳನ್ನು ನೀಡಬೇಕಿತ್ತು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.