ADVERTISEMENT

Na. D’Souza | ನಾ.ಡಿಸೋಜ: ಸಮುದಾಯ ಪ್ರಜ್ಞೆಯ ಲೇಖಕ

ಎಂ.ರಾಘವೇಂದ್ರ
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
   

ಸಾಗರ: ಲೇಖಕನೊಬ್ಬ ಹೇಗೆ ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ಸಮುದಾಯ ಪ್ರಜ್ಞೆಯೊಂದಿಗೆ ಸಾಹಿತ್ಯ ರಚಿಸುವ ಜೊತೆಗೆ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಾ.ಡಿಸೋಜ ಅವರ ಬರಹ ಮತ್ತು ಬದುಕು ನಿದರ್ಶನವಾಗಿದೆ.

ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುವ ಸೈಜುಗಲ್ಲನ್ನು ಕೆತ್ತಿ ನಿಖರವಾದ ಆಕಾರ ನೀಡಿ, ಬಳಕೆಗೆ ಯೋಗ್ಯವಾಗುವಂತೆ ಮಾಡುವ ಕೆಲಸದ ಕುಟುಂಬಕ್ಕೆ ನಾ.ಡಿ. ಸೇರಿದವರು. ಆ ಪರಂಪರೆಯನ್ನು ಮುಂದುವರಿಸುವ ರೀತಿಯಲ್ಲಿ ತಮ್ಮ ಬರವಣಿಗೆಯ ಮೂಲಕ ಸಮಾಜದ ಓರೆಕೋರೆಗಳನ್ನು ಗುರುತಿಸಿ ತಿದ್ದಿ ತೀಡುವ ಉತ್ಸಾಹವನ್ನು ಜೀವಿತಾವಧಿಯ ಕೊನೆಯ ತನಕವೂ ತೋರಿದ್ದು ನಾ.ಡಿ. ಅವರ ವೈಶಿಷ್ಟ್ಯ.

ಕತೆ, ಕಾದಂಬರಿ, ನಾಟಕ, ಕವನ, ಪ್ರಬಂಧ, ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ದಣಿವರಿಯದೇ ಬರೆಯುವ ಮೂಲಕ ಮಲೆನಾಡಿನ ಜೀವನ ಕ್ರಮ, ಸಂಘರ್ಷ, ಸಮಸ್ಯೆಗಳಿಗೆ ಇವರು ಕನ್ನಡಿ ಹಿಡಿಯುತ್ತಲೇ ಬಂದಿದ್ದರು.

ADVERTISEMENT

ಸಾಹಿತ್ಯದ ಬರವಣಿಗೆ ನಾ.ಡಿ. ಅವರ ಪಾಲಿಗೆ ಬೌದ್ಧಿಕ ವಿಲಾಸವಾಗಿರಲಿಲ್ಲ. ಶ್ರೇಷ್ಠತೆಯ ವ್ಯಸನದಿಂದಲೂ ಅವರು ದೂರವಿದ್ದರು. ತಮ್ಮ ಬರವಣಿಗೆಗಳ ಕುರಿತು ಸಾಹಿತ್ಯ ವಿಮರ್ಶಕರಿಂದ ಬರುವ ಅಭಿಪ್ರಾಯಗಳ ಬಗ್ಗೆ ಅವರು ಯಾವತ್ತೂ ಚಿಂತಿಸಿದವರಲ್ಲ. ಹೀಗಾಗಿ ಸರಳತೆ ಅವರ ಬರವಣಿಗೆ ಮತ್ತು ಬದುಕಿನಲ್ಲಿ ಎದ್ದು ಕಾಣುವ ಸಂಗತಿಯಾಗಿದೆ.

ಮೇಲ್ನೋಟಕ್ಕೆ ಅತ್ಯಂತ ಸೌಜನ್ಯದ ವ್ಯಕ್ತಿಯಂತೆ ಕಾಣುತ್ತಿದ್ದ ನಾ.ಡಿ ಊರಿನ ವಿಷಯ ಬಂದಾಗ ನಿಷ್ಠುರವಾದಿಯಾಗಲು ಹಿಂಜರಿದವರಲ್ಲ. ಆದರೆ ವಿಷಯಕ್ಕೆ ಮಾತ್ರ ಅವರ ವಿರೋಧವಿರುತ್ತಿತ್ತೇ ವಿನಾ ವ್ಯಕ್ತಿಗತವಾಗಿ ಅವರು ಯಾರನ್ನೂ ದ್ವೇಷಿಸಿದವರಲ್ಲ. ಹಾಗಾಗಿ ತೀರಾ ಇತ್ತೀಚಿನವರೆಗೂ ಮಲೆನಾಡು ಪ್ರದೇಶದಲ್ಲಿ ಯಾವುದೇ ಪ್ರಮುಖ ಕಾರ್ಯಕ್ರಮವಾದರೂ ಸಂಘಟಕರು ನಾ.ಡಿ. ಅವರ ಹಾಜರಿಯನ್ನು ಬಯಸುತ್ತಿದ್ದರು.

ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ಜೋಗ್ ಫಾಲ್ಸ್ ಬಳಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಆಗುತ್ತಿದ್ದುದ್ದನ್ನು ನಾ.ಡಿ. ಹತ್ತಿರದಿಂದ ನೋಡಿದವರು. ಈ ಕಾರಣಕ್ಕೆ ‘ಮುಳುಗಡೆ’ಯ ಸಂಕಟ ಅವರ ಬರವಣಿಗೆಯ ಜೀವದ್ರವ್ಯವೇ ಆಗಿದೆ. ತಮ್ಮನ್ನು ‘ಮುಳುಗಡೆ’ಯ ಲೇಖಕ ಎಂದೇ ಅವರು ಗುರುತಿಸಿಕೊಳ್ಳಲು ಬಯಸುತ್ತಿದ್ದರು.

‘ಸರ್ಕಾರಿ ನೌಕರರು ಹೇಗೆ ಇರಬೇಕು?’ ಎಂಬುದಕ್ಕೆ ನಾ.ಡಿ. ಮಾದರಿಯಾಗಿದ್ದಾರೆ. ‘ನಾನು ಸೇವೆಯುದ್ದಕ್ಕೂ ಯಾರಿಂದಲೂ ಒಂದು ರೂಪಾಯಿಯನ್ನೂ ಲಂಚ ಪಡೆದಿಲ್ಲ. ನನ್ನನ್ನು ನೋಡಿ ನನ್ನ ಸಹೊದ್ಯೋಗಿಗಳು ಹಾಸ್ಯ ಮಾಡುತ್ತಿದ್ದರು’ ಎಂದು ಈಚೆಗೆ ಅವರ ಕುರಿತು ನಿರ್ಮಾಣವಾಗಿರುವ ಸಾಕ್ಷ್ಯಚಿತ್ರದಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಮಲೆನಾಡಿನಲ್ಲಿ ನಡೆದ ಐತಿಹಾಸಿಕ ಕಾಗೋಡು ಸತ್ಯಾಗ್ರಹ ನಾ.ಡಿ.ಯವರ ಸಾಹಿತ್ಯದ ಮೇಲೆ ಪರಿಣಾಮ ಬೀರಿದ ಮತ್ತೊಂದು ಪ್ರಮುಖ ಸಂಗತಿಯಾಗಿದೆ. ಈ ಸತ್ಯಾಗ್ರಕ್ಕೆ ಕಾರಣವಾದ ಗೇಣಿ ಭತ್ತ ಅಳೆದುಕೊಡುವ ಕೊಳಗದ ಅಳತೆಗೆ ಸಂಬಂಧಿಸಿದಂತೆ ಅವರು ರಚಿಸಿರುವ ‘ಕೊಳಗ’ ಕಾದಂಬರಿ ಕಾಗೋಡು ಚಳವಳಿಯ ದಾಖಲೆಯಂತಿದೆ.

ಮಲೆನಾಡು ಪ್ರದೇಶದ ದೀವರ ಸಮುದಾಯದ ವಿಶಿಷ್ಟ ಜನಪದ ಆಚರಣೆಗಳ ಬಗ್ಗೆಯೂ ನಾ.ಡಿ.ಯವರಿಗೆ ವಿಶೇಷ ಆಸಕ್ತಿ ಇತ್ತು. ಹೀಗಾಗಿಯೆ ತಮ್ಮ ಬರವಣಿಗೆಯದುದ್ದಕ್ಕೂ ಆ ಸಮುದಾಯದ ವೈಶಿಷ್ಟ್ಯಗಳನ್ನು ಅವರು ದಾಖಲಿಸುತ್ತಲೇ ಬಂದಿದ್ದರು.

ಸಾಂಪ್ರದಾಯಿಕ ಕ್ಯಾಥೊಲಿಕ್ ಕ್ರೈಸ್ತ ಕುಟುಂಬಕ್ಕೆ ಸೇರಿದ್ದ ನಾ.ಡಿ. ಯಾವತ್ತೂ ಚರ್ಚ್‌ನ ಪ್ರಾರ್ಥನೆಗೆ ಹೋದವರಲ್ಲ. ಆದರೆ ತಮ್ಮ ಕುಟುಂಬದ ಸದಸ್ಯರಿಗೆ ಇಂತಹ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದವರಲ್ಲ. ಧಾರ್ಮಿಕ ಆವರಣಗಳನ್ನು ದಾಟಿ ಒಂದು ಸಮುದಾಯ ಅನನ್ಯತೆ ಗಳಿಸಬೇಕು ಎಂಬ ತುಡಿತವನ್ನು ತಮ್ಮ ಹಲವು ಭಾಷಣಗಳಲ್ಲಿ ಅವರು ವ್ಯಕ್ತಪಡಿಸಿದ್ದರು.

ಸಮಕಾಲೀನ ವಿದ್ಯಮಾನಗಳಿಗೆ ತಮ್ಮ ಬರಹಗಳ ಮೂಲಕ ಸ್ಪಂದಿಸುವ ಜೊತೆಗೆ ಸಂದರ್ಭ ಬಂದಾಗ ಬೀದಿಗಿಳಿದು ಹೋರಾಟ ನಡೆಸಿದ್ದು ಕೂಡ ನಾ.ಡಿ. ಅವರ ಬದುಕಿನ ವಿಶೇಷ. ಇತಿಹಾಸ ಪ್ರಸಿದ್ಧ ಸ್ಥಳವಾಗಿರುವ ಇಕ್ಕೇರಿ ಪ್ರಾಂತ್ಯದಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ ಎಂಬ ಸುದ್ದಿ ಹರಡಿದ ಸಮಯದಲ್ಲಿ ಗಣಿ ಸಮೀಕ್ಷೆಗೆಂದು ಬಂದ ಹೆಲಿಕಾಪ್ಟರ್ ಮಾಡಿದ ಸದ್ದಿನ ಕುರಿತೆ ಕತೆ ಬರೆದು ಜಾಗೃತಿ ಮೂಡಿಸಿದ್ದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

ಬ್ರಿಟಿಷರ ಕಾಲದಲ್ಲಿ ಮಲೆನಾಡು ಭಾಗಕ್ಕೆ ಬಂದಿದ್ದ ರೈಲ್ವೆ ಸೌಲಭ್ಯವನ್ನು ನಂತರ ಬಂದ ಸರ್ಕಾರ ನಿಲ್ಲಿಸಲು ಮುಂದಾದಾಗ ನಡೆದ ಹೋರಾಟಕ್ಕೆ ನಾಯಕತ್ವ ಕೊಟ್ಟಿದ್ದು ನಾ.ಡಿ. ಅವರ ಹೆಗ್ಗಳಿಕೆ. ಹೀಗೆ ಅರ್ಧ ಶತಮಾನಕ್ಕೂ ಹೆಚ್ಚು ಮಲೆನಾಡಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬದುಕಿನ ಕೊಂಡಿಯಂತೆ ಬಾಳಿದವರು ನಾ.ಡಿ.

ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಬಂಡಾಯ ಹೀಗೆ ಹಲವು ಹಂತಗಳನ್ನು ತಮ್ಮ ಬದುಕಿನಲ್ಲಿ ಕಂಡರೂ ಯಾವುದೇ  ಪಂಥದ ಜೊತೆಗೆ ಗುರುತಿಸಿಕೊಳ್ಳುವಲ್ಲಿ ನಾ.ಡಿ.ಯವರಿಗೆ ಆಸಕ್ತಿ ಇರಲಿಲ್ಲ. ಆದರೆ, ಅವರ ಸಾಹಿತ್ಯದಲ್ಲಿ ಈ ಎಲ್ಲಾ ಪಂಥಗಳ ಆಶಯ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ ಎಂಬುದೆ ಅವರ ವೈಶಿಷ್ಟ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.