ADVERTISEMENT

ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಕುತ್ತು!

ತೀರ್ಥಹಳ್ಳಿ, ಆಗುಂಬೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಶಿವಾನಂದ ಕರ್ಕಿ
Published 13 ನವೆಂಬರ್ 2018, 20:21 IST
Last Updated 13 ನವೆಂಬರ್ 2018, 20:21 IST
ತೀರ್ಥಹಳ್ಳಿ–ಆಗುಂಬೆ ನಡುವಿನ ರಸ್ತೆ ಅಂಚಿನಲ್ಲಿರುವ ಬೃಹತ್ ಗಾತ್ರದ ಮರಗಳು
ತೀರ್ಥಹಳ್ಳಿ–ಆಗುಂಬೆ ನಡುವಿನ ರಸ್ತೆ ಅಂಚಿನಲ್ಲಿರುವ ಬೃಹತ್ ಗಾತ್ರದ ಮರಗಳು   

ತೀರ್ಥಹಳ್ಳಿ: ಶಿವಮೊಗ್ಗ, ಉಡುಪಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 169 (ಎ) ರಸ್ತೆ ಕಾಮಗಾರಿ ಆರಂಭವಾಗಿದ್ದು, ರಸ್ತೆ ಅಂಚಿನಲ್ಲಿರುವ ಅಪರೂಪದ ಸಸ್ಯಸಂಕುಲಕ್ಕೆ ಸಂಚಕಾರ ಎದುರಾಗಿದೆ.

ಪಶ್ಚಿಮಘಟ್ಟ ಪ್ರದೇಶದ ಅತಿ ಸೂಕ್ಷ್ಮ ಜೀವವೈವಿಧ್ಯ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಸರ್ಕಾರ ನಾಲ್ಕು ವರ್ಷಗಳ ಹಿಂದೆ ನೀಲನಕ್ಷೆ ಸಿದ್ಧಪಡಿಸಿದ್ದು, ಈಗ ಆರಂಭವಾಗಿದೆ.

ನೂರಾರು ವರ್ಷಗಳಿಂದ ನೆರಳು ನೀಡಿ ಪಶು–ಪಕ್ಷಿಗಳಿಗೆ ಆಹಾರ ಉಣಿಸಿದ್ದ ಮರಗಳನ್ನು ತೆರವುಗೊಳಿಸಲು ಮುಂದಾಗಿರುವುದಕ್ಕೆ ಪರಿಸರ ಪ್ರೇಮಿಗಳಿಂದ ಅಸಮಾಧಾನ ವ್ಯಕ್ತವಾಗಿದೆ. ತೀರ್ಥಹಳ್ಳಿಯ ಬಾಳೇಬೈಲಿನಿಂದ ಆಗುಂಬೆವರೆಗಿನ 16 ಕಿ.ಮೀ ರಸ್ತೆ ಕಾಮಗಾರಿ ₹ 65 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಇದರಿಂದಾಗಿ ರಸ್ತೆ ಅಂಚಿನಲ್ಲಿರುವ ಬೃಹತ್ ಗಾತ್ರದ ಮರಗಳು ನೆಲಕ್ಕುರಳಲಿದ್ದು, ಅರಣ್ಯ ಇಲಾಖೆ ಮರಗಳನ್ನು ಉಳಿಸಿಕೊಳ್ಳಲಿದೆಯೇ ಎನ್ನುವುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.

ADVERTISEMENT

ಆಗುಂಬೆ, ತೀರ್ಥಹಳ್ಳಿ, ಸೋಮೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಕಡಿತಲೆಗೆ ಮರಗಳನ್ನು ಗುರುತಿಸಲಾಗಿದೆ. ತೀರ್ಥಹಳ್ಳಿಯಿಂದ ಆಗುಂಬೆವರೆಗಿನ ರಸ್ತೆ ಬದಿಯಲ್ಲಿ ಮೈಸೂರು ಅರಸರ ಕಾಲದ ಅಳ್ವಿಕೆಯಲ್ಲಿ ನೆಡಲಾದ ಬೃಹತ್ ಗಾತ್ರದ ಸಾಲುಧೂಪ, ಹಲಸು ಮುಂತಾದ ಮರಗಳ ಕಡಿತಲೆಗೆ ಮರಗಳಿಗೆ ನಂಬರ್ ಹಾಕಲಾಗಿದೆ.

ಮಾರ್ಗದಲ್ಲಿನ 400ಕ್ಕೂ ಹೆಚ್ಚು ಬೃಹತ್ ಗಾತ್ರದ ಮರಗಳು ಬಲಿಯಾಗಲಿವೆ. ಅಪರೂಪದ ಚಿಕ್ಕಪುಟ್ಟ ಗಿಡಗಂಟಿಗಳು, ಬಳ್ಳಿಗಳು, ಔಷಧೀಯ ಸಸ್ಯಗಳು ಜೆಸಿಬಿ ಯಂತ್ರದ ಅಬ್ಬರಕ್ಕೆ ಸಿಲುಕುವಂತಾಗಿದೆ.

ಈ ಮಾರ್ಗದಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆ ವಿಸ್ತರಣೆ ಅನಿವಾರ್ಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿ ಶಿವಮೊಗ್ಗ, ಆಗುಂಬೆ, ಉಡುಪಿ ಮಾರ್ಗ ಪರಿವರ್ತನೆಗೊಳ್ಳಲಿದೆ. ರಂಜದಕಟ್ಟೆಯಿಂದ ಕಾಮಗಾರಿ ಈಗ ಆರಂಭವಾಗಿದ್ದು, ಸುಮಾರು 10 ಮೀಟರ್ ಅಗಲದ ಡಾಂಬರ್ ರಸ್ತೆ ನಿರ್ಮಾಣಗೊಳ್ಳಲಿದೆ.

ಜಗತ್ತಿನ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮಘಟ್ಟ ಪ್ರದೇಶದ ಆಗುಂಬೆಯಲ್ಲಿನ ಪ್ರಕೃತಿ ಸೌಂದರ್ಯ, ಸೂರ್ಯಾಸ್ತ, ಮಳೆಯ ವೈಭವವನ್ನು ವೀಕ್ಷಿಸಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆಗುಂಬೆ ಮಾರ್ಗದ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿರುವುದು ಅಭಿವೃದ್ಧಿ ಪರ ಹಾಗೂ ಪ್ರಕೃತಿ ಪ್ರಿಯರ ನಡುವೆ ಪರ, ವಿರೋಧದ ಚರ್ಚೆಗೆ ಕಾರಣವಾಗಿದೆ.

* ರಸ್ತೆ ಅಂಚಿನಲ್ಲಿ ನೂರಾರು ವರ್ಷಗಳ ಬೃಹತ್ ಗಾತ್ರದ ಮರಗಳಿವೆ. ಅವುಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸುವುದು ಉತ್ತಮ.
–ಟಿ.ಕೆ.ರಮೇಶ್ ಶೆಟ್ಟಿ, ಅಧ್ಯಕ್ಷರು, ತಾಲ್ಲೂಕು ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ

*ತೀರ್ಥಹಳ್ಳಿಯಿಂದ ಆಗುಂಬೆವರೆಗಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿನ ರಸ್ತೆ ಅಂಚಿನಲ್ಲಿರುವ ಮರಗಳನ್ನು ಗುರುತಿಸಿ ನಂಬರ್ ಹಾಕುವ ಕೆಲಸವನ್ನು ಅರಣ್ಯ ಇಲಾಖೆ ಕೈಗೊಂಡಿದೆ.
–ಶಿವಶಂಕರ್, ಎಸಿಎಫ್, ತೀರ್ಥಹಳ್ಳಿ.

ಮುಖ್ಯಾಂಶಗಳು
* ಸುಮಾರು 400 ಮರಗಳ ಬಲಿ
* 16 ಕಿ.ಮೀ ರಸ್ತೆ ಕಾಮಗಾರಿ
* ಆಗುಂಬೆ ಸೌಂದರ್ಯಕ್ಕೆ ಧಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.