ADVERTISEMENT

ಔಷಧ ಸಸ್ಯಗಳ ಪಶ್ಚಿಮಘಟ್ಟ ಸಂರಕ್ಷಿಸಲಿ: ಮಾದಾರ ಚನ್ನಯ್ಯ ಸ್ವಾಮೀಜಿ

ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 18:47 IST
Last Updated 25 ಅಕ್ಟೋಬರ್ 2018, 18:47 IST

ದಾವಣಗೆರೆ: ಪಾರಂಪರಿಕ ವೈದ್ಯ ಪದ್ಧತಿಗೆ ಅಗತ್ಯವಿರುವ ಹಲವು ಬಗೆಯ ಔಷಧ ಸಸ್ಯಗಳಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಕಸ್ತೂರಿರಂಗನ್‌ ವರದಿಯನ್ನು ಜಾರಿಗೊಳಿಸಬೇಕು ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವದಲ್ಲಿ ಅವರು ಮಾತನಾಡಿದರು.

ಪಶ್ಚಿಮಘಟ್ಟ, ಹಿಮಾಲಯ ಪರ್ವತ ಹಾಗೂ ಹಲವು ಪರ್ವತ ಶ್ರೇಣಿಗಳಲ್ಲಿ ಔಷಧ ಸಸ್ಯಗಳಿವೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ. ಇದರಿಂದ ಹವಾಮಾನ ಬದಲಾವಣೆಯೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ವಿಜ್ಞಾನಿಗಳಾದ ಮಾಧವ್‌ ಗಾಡ್ಗೀಳ್, ಕಸ್ತೂರಿರಂಗನ್‌ ಅವರು ಪಶ್ಚಿಮಘಟ್ಟ ಸಂರಕ್ಷಣೆಗಾಗಿ ವರದಿ ನೀಡಿದ್ದಾರೆ. ಪ್ರಕೃತಿ ವಿಕೋಪ ತಡೆಯುವುದರ ಜೊತೆಗೆ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಔಷಧ ಸಸ್ಯಸಂಕುಲಗಳ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಪ್ರತಿಪಾದಿಸಿದರು.

ADVERTISEMENT

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ‘ಈ ಹಿಂದೆ ಉತ್ರಾಣಿ ಬೇರನ್ನು ಮೂರು ದಿನ ಹೊಟ್ಟೆಗೆ ಕಟ್ಟಿಕೊಂಡಿದ್ದರೆ ಸಹಜವಾಗಿ ಹೆರಿಗೆ ಆಗುತ್ತಿತ್ತು. ಆದರೆ, ಇಂದು ಸಹಜ ಹೆರಿಗೆ ಆಗುವುದಿಲ್ಲ ಎಂಬ ಭಯದ ವಾತಾವರಣವನ್ನು ವೈದ್ಯರು ಸೃಷ್ಟಿಸುತ್ತಿದ್ದಾರೆ. ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.