ADVERTISEMENT

ಸಾವರ್ಕರ್‌ಗೂ ರಾಜ್ಯಕ್ಕೂ ಏನು ಸಂಬಂಧ: ಡಿ.ಕೆ.ಶಿವಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 15:47 IST
Last Updated 18 ಡಿಸೆಂಬರ್ 2022, 15:47 IST
 ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬಾಗಲಕೋಟೆ: ‘ಸುವರ್ಣಸೌಧದಲ್ಲಿ ಸಾವರ್ಕರ್ಭಾವಚಿತ್ರ ಅಳವಡಿಸುತ್ತಿರುವುದು ಸರಿಯಲ್ಲ. ಕರ್ನಾಟಕಕ್ಕೂ, ಅವರಿಗೂ ಏನು ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಬೇಡ್ಕರ್‌, ಗಾಂಧೀಜಿ ಅವರ ಭಾವಚಿತ್ರ ಅನಾವರಣ ಮಾಡಲಾಗುತ್ತಿದೆ ಎಂದಷ್ಟೇ ಸ್ಪೀಕರ್‌ ಕಚೇರಿಯಿಂದ ಆಹ್ವಾನ ಬಂದಿದೆ. ಸಾವರ್ಕರ್ಭಾವಚಿತ್ರದ ವಿಷಯ ತಿಳಿಸಿಲ್ಲ. ಅನಾವರಣ ಮಾಡಿದರೆ, ಕಾಂಗ್ರೆಸ್‌ ನಿಲುವು ಅಲ್ಲಿಯೇ ಪ್ರಕಟಿಸಲಾಗುವುದು’ ಎಂದರು.

ಯಾವ ರಾಜ್ಯದವರು ಎನ್ನುವುದು ಮುಖ್ಯವಲ್ಲ:

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಸ್ವಾತಂತ್ರ್ಯ ಹೋರಾಟಗಾರರು ಯಾವ ರಾಜ್ಯದವರು ಎನ್ನುವುದು ಮುಖ್ಯವಲ್ಲ. ಸಾವರ್ಕರ್ ರಾಜ್ಯ ಮುಖ್ಯವಾಗುವುದಿಲ್ಲ. ಸೋನಿಯಾ ಗಾಂಧಿಗೂ, ಭಾರತಕ್ಕೇನು ಸಂಬಂಧ’ ಎಂದು ಪ್ರಶ್ನಿಸಿದರು.

ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಬೇಡ್ಕರ್ ಅವರು ಮಹಾರಾಷ್ಟ್ರದವರು, ವಲ್ಲಭಾಯ್ ಪಟೇಲರು, ಗಾಂಧೀಜಿ ಗುಜರಾತಿನವರು. ಅವರೆಲ್ಲರೂ ದೇಶದ ಸ್ವಾತಂತ್ರ್ಯ ಹೋರಾಟಗಾರರು. ಅವರ ತ್ಯಾಗದಿಂದ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದಷ್ಟೇ ಮುಖ್ಯವಾಗುತ್ತದೆ’ ಎಂದರು.

‘ಸಾವರ್ಕರ್ಇದ್ದ ಜೈಲಿನಲ್ಲಿ ಡಿ.ಕೆ. ಶಿವಕುಮಾರ್, ರಾಹುಲ್‌ ಗಾಂಧಿ ತಿಂಗಳ ಕಾಲ ಇದ್ದು ಬರಲಿ. ಆಗ ಅವರ ಸಂಕಷ್ಟದ ಅರಿವು ಆಗುತ್ತದೆ. ದಮ್‌ ಇದ್ದರೆ ಜೈಲಿಗೆ ಹೋಗಲಿ. ಹಾಗೆ ಮಾಡಿದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದು ಸವಾಲು ಹಾಕಿದರು.

‘ಸಾವರ್ಕರ್ ಬಗ್ಗೆ ಇಂದಿರಾಗಾಂಧಿ ಸಹ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದರು. ಪತ್ರ ಸಹ ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪಕ್ಷದವರಿರಲಿ ಅವರನ್ನು ಗೌರವಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.