ADVERTISEMENT

ಎಸ್‌ಡಿಪಿಐ ಜತೆಗಿನ ನಿಮ್ಮ ಒಪ್ಪಂದವೇನು? ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2023, 4:27 IST
Last Updated 1 ಜನವರಿ 2023, 4:27 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಎಸ್‌ಡಿಪಿಐ ಜತೆಗೆ ಒಪ್ಪಂದ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರೇ, ಆ ಒಪ್ಪಂದ ಏನು ಬಹಿರಂಗಪಡಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಆಗ್ರಹಿಸಿದೆ.

ಪಿಎಫ್ಐನ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು ಎಂಬ ಅಮಿತ್‌ ಶಾ ಅವರ ಹೇಳಿಕೆಗೆ ಶನಿವಾರ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ಎಸ್‌ಡಿಪಿಐ ಜೊತೆಗೆ ಬಿಜೆಪಿಗೆ ನಂಟಿದೆ ಎಂದು ಆರೋಪಿಸಿದ್ದರು.

‘ಎಸ್‍ಡಿಪಿಐ ಜೊತೆ ಬಿಜೆಪಿ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಸದ್ಯದಲ್ಲಿಯೇ ಇವರ ಒಳ ಒಪ್ಪಂದದ ವಿವರಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ’ ಎಂದು ಅವರು ಹೇಳಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದೆ.

‘ಪಿಎಫ್ಐ ನಿಷೇಧಿಸಿದ ಬಳಿಕ ಎಸ್‌ಡಿಪಿಐ ಜತೆಗೆ ಒಪ್ಪಂದ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರೇ, ಆ ಒಪ್ಪಂದ ಏನು ಬಹಿರಂಗಪಡಿಸಿ. ಸಿದ್ಧಾಂತವೇ ಇಲ್ಲದೆ ಯಾರ ಜತೆಗೆ ಬೇಕಾದರೂ ಒಪ್ಪಂದಗಳನ್ನು ಮಾಡಿಕೊಳ್ಳುವ ನೀವು, ತಮ್ಮಂತೆ ಪರರನ್ನು ಬಗೆದರೆ ಹೇಗೆ? ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಶಾರಿಕ್‌ ಪರ ಬಹಿರಂಗವಾಗಿ ನಿಲ್ಲುವ ಅಧ್ಯಕ್ಷರಿರುವ ಪಕ್ಷದಲ್ಲಿ ತಾವಿದ್ದೀರಿ. ನಿಮಗೆ ಬೇಕಾದಷ್ಟು ಕಾಲ ಪಿಎಫ್‌ಐಯನ್ನು ಬಳಸಿಕೊಂಡು ಈಗ ಅದರ ಮೇಲೆ ನಿಷೇಧ ಹೇರಿದ ನಂತರ, ಈಗ ನಿಮ್ಮ ಪಾಪಗಳನ್ನು ತೊಳೆದುಕೊಳ್ಳುವ ಯೋಜನೆಯಲ್ಲಿದ್ದೀರಾ’ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

‘ಮತೀಯ ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ವಿರುದ್ಧ ದಾಖಲಾದ ಕೇಸುಗಳನ್ನು ವಾಪಸ್‌ ಪಡೆಯಲು ನೀವು ಅನುಸರಿಸಿದ ಮಾರ್ಗಗಳು ಏನು ಎಂಬುದು ದಾಖಲೆಗಳಲ್ಲಿವೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಸಿದ್ದರಾಮಯ್ಯ ಅವರೇ? ಆದರೆ, ನಿಮಗೆ ಬೇಕಾದಾಗ ಮುಸಲ್ಮಾನರ ತುಷ್ಟೀಕರಣಕ್ಕಿಳಿದು ನಿಮಗೆ ಅನುಕೂಲಕರ ಅಲ್ಲ ಎಂದು ಅನಿಸಿದಾಗ ಅವರನ್ನು ಮಧ್ಯದಲ್ಲಿ ಕೈ ಬಿಡುವುದು ಸರಿಯೇ? ಅಥವಾ ನೀವು ಪರ ಮಾತನಾಡಿ; ನಾನು ವಿರೋಧ ಮಾತನಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದೀರಾ’ ಎಂದು ಕೇಳಿದೆ ಬಿಜೆಪಿ.

‘ಉಡುಪಿಯಲ್ಲಿ ಹಿಜಾಬ್‌ ಗಲಾಟೆ ನಡೆದಾಗ ನೀವಾಗಲಿ ನಿಮ್ಮಪಕ್ಷವಾಗಲಿ ಅದನ್ನು ವಿರೋಧಿಸಲಿಲ್ಲ, ಮಹಿಳೆಯರ ಹಕ್ಕುಗಳನ್ನು ದಮನ ಮಾಡುವ ಶಕ್ತಿಗಳ ಪರ ನೀವು ಮೌನ ವಹಿಸಿದ್ದೇಕೆ ಸಿದ್ದರಾಮಯ್ಯ ? ಇದೀಗ ಮುಸ್ಲಿಂ ರಾಷ್ಟ್ರಗಳ ಕಾಲೇಜ್‌ಗಳಲ್ಲೂ ಹಿಜಾಬ್‌ಗೆ ನಿಷೇಧವಿದೆ. ಅಲ್ಲಿನ ಮಾಧ್ಯಮಗಳಿಗೂ ನೀವು ಹೇಳಿಕೆ ಕೊಡುವಿರಾ? ಅದೇನೆ ಇರಲಿ ನಿಮ್ಮ ಪಕ್ಷದ ಹಾಗೂ ನಿಷೇಧಿತ ಪಿಎಫ್ಐ ನಡುವಿನ ಸಂಬಂಧ ಗುಟ್ಟಾಗೇನೂ ಉಳಿದಿರಲಿಲ್ಲ. ಅಧಿಕಾರಕ್ಕಾಗಿ ದೇಶದ ಹಲವು ಕಡೆ ಮೂಲಭೂತವಾದಿ ಇಸ್ಲಾಮಿಕ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಾರ್ಟಿಗೆ ಕರ್ನಾಟಕದಲ್ಲಿ ಎಸ್‌ಡಿಪಿಐ ಆಸರೆ ಎಂಬ ಸತ್ಯ ತಾವೇ ಈ ಮೂಲಕ ಒಪ್ಪಿಕೊಂಡಿರಲ್ಲವೆ’ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.