ADVERTISEMENT

ಸರ್ಕಾರ ಹೋದರೆ ಏನು ಮಾಡುವುದಕ್ಕೆ ಆಗುತ್ತೆ?: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 1:59 IST
Last Updated 10 ಜುಲೈ 2019, 1:59 IST
ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ   

ಬೆಂಗಳೂರು:‘ಈಗ ರಾಜಕಾರಣದಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿಯನ್ನು ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೇ ಬಿಟ್ಟಿದ್ದೇನೆ. ಕೊನೆಗೂ ಏನಾಗುತ್ತೆ? ಸರ್ಕಾರ ಉಳಿದರೆ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರಿಯುತ್ತಾರೆ. ಸರ್ಕಾರ ಹೋದರೆ ಏನು ಮಾಡಲಾಗುತ್ತೆ?’

ಇದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಅಭಿಪ್ರಾಯ.

‘ಪ್ರಜಾವಾಣಿ’ ಪ್ರತಿನಿಧಿ ಶುಕ್ರವಾರ ರಾತ್ರಿ ಅವರ ಮನೆಗೆ ಹೋದಾಗ, ಗೌಡರು ಏಕಾಂಗಿಯಾಗಿ ಕುಳಿತುಇಂಗ್ಲಿಷ್‌ ಸುದ್ದಿ ವಾಹಿನಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರ ಬಜೆಟ್‌ ಚರ್ಚೆ ವೀಕ್ಷಿಸುತ್ತಿದ್ದರು. ‘ಸಾರ್‌... ಕನ್ನಡ ಟಿವಿ ಚಾನೆಲ್‌ಗಳಲ್ಲಿ ರಾಜ್ಯ ಸರ್ಕಾರದ ಅಳಿವು– ಉಳಿವಿನ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿದೆ..!’ ಎಂದು ಕೆಣಕಿದರೆ, ಗಾಳಿಯಲ್ಲಿ ಅಂಗೈ ಆಡಿಸಿದರು. ‘ಟಿವಿಯಲ್ಲಿ ಅದೆಲ್ಲ ನೋಡುವುದನ್ನು ಬಿಟ್ಟಿದ್ದೇನೆ. ನೋಡಿದರೆ ನನ್ನ ಆರೋಗ್ಯ ಕೆಡುತ್ತೆ. ಎಂದರು. ಪಕ್ಷವನ್ನು ಮತ್ತೆ ತಳಮಟ್ಟದಿಂದ ಗಟ್ಟಿಯಾಗಿ ಕಟ್ಟುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಹಿಂದಿನ ಮತ್ತು ಈಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ದೇವರ ಮೇಲೆ ನಂಬಿಕೆ ಇಟ್ಟವನು. ರಾಜಕೀಯ ಜೀವನದಲ್ಲಿ ಹಿಂದೆ ನಡೆದ ಘಟನೆಗಳೆಲ್ಲ ನೆನಪಿದೆ. ಮುಖ್ಯಮಂತ್ರಿಯಾಗಿದ್ದೆ, ಹತ್ತು ತಿಂಗಳಿಗೆ ಪ್ರಧಾನಮಂತ್ರಿಯಾದೆ. ನೀರಾವರಿ ಸಚಿವನಾಗಿದ್ದಾಗ ಮೂರು ಸಲ ರಾಜೀನಾಮೆ ಕೊಟ್ಟಿದ್ದೆ, ಅದರಲ್ಲಿ ಒಮ್ಮೆ ಪಕ್ಷ ಉಳಿಸಲು. ರಾಮಕೃಷ್ಣ ಹೆಗಡೆಯವರನ್ನು ಕನಕಪುರದಿಂದ ನಿಲ್ಲಿಸಿ ಗೆಲ್ಲಿಸಿದ್ದೆ. ಕೆಲವರಿಗೆ ಅದೆಲ್ಲ ನೆನಪಿಲ್ಲ. ಹಿಂದೆಯೂ ಪಕ್ಷವನ್ನು ಉಳಿಸಿದ್ದೇನೆ. ಈಗ ಪಕ್ಷ ಉಳಿಸುವುದಕ್ಕೆ ನನ್ನ ಚಟುವಟಿಕೆ ಸೀಮಿತಗೊಳಿಸಿದ್ದೇನೆ’ ಎಂದರು.

‘ನನಗೀಗ ಮೊದಲಿನಷ್ಟು ಶಕ್ತಿ ಇಲ್ಲ. ಆದರೆ ನನ್ನ ಆತ್ಮವಿಶ್ವಾಸ ಹಾಗೆಯೇ ಇದೆ. ಫೀನಿಕ್ಸ್‌ನಂತೆ ಮರಳಿ ಬರುತ್ತೇನೆಂದು ಹೇಳುವುದಿಲ್ಲ. ಆ ದಿನಗಳು ಹೋದವು. 2004ರಲ್ಲಿ ಹಾಗಾಗಿತ್ತು. ಈಗಲೂ ಪಕ್ಷವನ್ನು ಬಲಶಾಲಿ ಮಾಡಬಲ್ಲೆ. ಬಿಕ್ಕಟ್ಟಿಗಾಗಿ ಯಾರನ್ನೂ ದೂರುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿಸೋತದ್ದಕ್ಕೂ ಪಶ್ಚಾತ್ತಾಪವಿಲ್ಲ. ದೇವರು ಈ ತೀರ್ಪು ಕೊಟ್ಟಿದ್ದಾನೆ– ನೀ ಪಕ್ಷ ಕಟ್ಟು ತಳಮಟ್ಟದಿಂದ ಅಂತ. ಪ್ರಾದೇಶಿಕ ಪಕ್ಷವೊಂದು ಮುಳುಗಬಾರದು ಎನ್ನುವುದು ದೇವರ ನಿರ್ಧಾರ ಅಂದುಕೊಂಡಿದ್ದೇನೆ’ ಎಂದರು.

‘ಸಚಿವ ಸಂಪುಟದಲ್ಲಿ ಎಲ್ಲ ವರ್ಗದವರಿಗೆ ಸ್ಥಾನ ಕೊಡಲಿಲ್ಲ’ ಎಂದಾಗ ‘ಕುಮಾರಸ್ವಾಮಿ ಸಂಪುಟದಲ್ಲಿ ಒಂದು ವರ್ಷ ಎರಡು ಸ್ಥಾನಖಾಲಿ ಇಟ್ಟರು. ಒಬ್ಬ ಅಲ್ಪಸಂಖ್ಯಾತರಿಗೆ, ಫಾರೂಕ್‌ಗೆ ಕೊಡಿ ಅಂತ ಹಲವು ಸಲ ಹೇಳಿದೆ. ಕುಮಾರಸ್ವಾಮಿ ಲೆಕ್ಕಾಚಾರ ಬೇರೆಯಿತ್ತು. ಪಕ್ಷೇತರ ಶಾಸಕರು ಬಂದರೆ ಇರಲಿ ಎಂದುಕೊಂಡರು. ಈ ಸಲ ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಅದೀಗ ಮಿಸ್‌ಫೈರ್‌ ಆಗಿದೆ’ ಎಂದರು.

‘ಎರಡೂ ಪಕ್ಷಗಳು ಪರಸ್ಪರ ಅಪನಂಬಿಕೆಯಿಂದ ಕೆಲಸ ಮಾಡಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏರುಪೇರಾಯಿತು. ಇದನ್ನು ಬೆನ್ನ ಹಿಂದಿನ ಚೂರಿ ಇರಿತ ಎನ್ನುವುದು ಸರಿಯಲ್ಲ. ಟೋಟಲಿ ಮಿಸ್‌ ಅಂಡರ್‌ಸ್ಟಾಂಡಿಂಗ್‌. ಪ್ರಾದೇಶಿಕ ಪಕ್ಷಕ್ಕೆ ಈಗಲೂ ರಾಜ್ಯದಲ್ಲಿ ಭವಿಷ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.