ಬೆಂಗಳೂರು: ‘ವಾಟ್ಸ್ ಆ್ಯಪ್ ಮೂಲಕ ಕಳುಹಿಸಲಾದ ಸಂದೇಶವನ್ನು ಡೆತ್ ನೋಟ್ ಎಂದು ಪರಿಗಣಿಸಲಾಗದು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ‘ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ’ ಎಂಬ ಆರೋಪ ಹೊತ್ತ ಶ್ರೀನಿವಾಸ ನಗರದ ಬಿ.ಸಿ.ರಾಜಶೇಖರ್, ಬಾಪೂಜಿ ನಗರದ ಬಿ.ಸಿ.ರಾಮಕೃಷ್ಣ ಮತ್ತು ಹನುಮಂತ ನಗರದ ಎಚ್.ಶಿವಯೋಗಿ ಅವರಿಗೆ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠವು ಜಾಮೀನು ನೀಡಿದೆ.
‘ಅರ್ಜಿದಾರರು ತಲಾ ₹ 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು’ ಎಂಬ ಷರತ್ತು ವಿಧಿಸಿದೆ.
ಪ್ರಕರಣವೇನು?: ರಾಜಶೇಖರ್ ಅವರು ನಗರದ ಕಬ್ಬನ್‌ಪೇಟೆಯಲ್ಲಿರುವ ‘ಶ್ರೀ ಚಂಪಕಧಾಮ’ ಚಿನ್ನಾಭರಣ ಮಾರಾಟ ಮಳಿಗೆ ಮಾಲೀಕರು. ಇವರು, ತಮ್ಮ ಅಂಗಡಿಯಲ್ಲಿ 2019ರ ಜನವರಿ 21ರಂದು 200 ಗ್ರಾಂ ತೂಕದ ಬಂಗಾರ ಕಳುವಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಏತನ್ಮಧ್ಯೆ ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಧನಂಜಯ (38) ಅವರು, 2019ರ ಮಾರ್ಚ್ 15ರಂದು ಬೆಳಿಗ್ಗೆ 10.30ರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಧನಂಜಯ ಅವರ ಪತ್ನಿ ರಾಜಶೇಖರ್, ರಾಮಕೃಷ್ಣ ಮತ್ತು ಶಿವಯೋಗಿ ವಿರುದ್ಧ ಪೊಲೀಸರಿಗೆ ದೂರು ನೀಡಿ, ‘ಈ ಮೂವರೂ ನನ್ನ ಪತಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ’ ಎಂದು ಆರೋಪಿಸಿದ್ದರು.
‘ಬಂಗಾರವನ್ನು ಧನಂಜಯ ಅವರೇ ಕದ್ದಿದ್ದಾರೆ ಎಂದು ಶಂಕಿಸಿ ರಾಜಶೇಖರ್ ಮತ್ತು ಅವರ ಕುಟುಂಬದವರು ಕೆಟ್ಟದಾಗಿ ನಡೆಸಿಕೊಂಡು ಹಿಂಸೆ ನೀಡಿದ್ದರು. ಇದರಿಂದ ಧನಂಜಯ ಮಾನಸಿಕ ಮತ್ತು ದೈಹಿಕ ಆಘಾತಕ್ಕೆ ಒಳಗಾಗಿ ಖಿನ್ನತೆಗೆ ಜಾರಿದ್ದರು’ ಎಂದು ದೂರಿನಲ್ಲಿ ವಿವರಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನೂ ಬಂಧಿಸಿದ್ದರು. ಕೋರ್ಟ್ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ ಮೂವರೂ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಧನಂಜಯ ವಾಟ್ಸ್ ಆ್ಯಪ್‌ನಲ್ಲಿ ಕಳುಹಿಸಿದ ಸಂದೇಶಗಳನ್ನೇ ಡೆತ್ ನೋಟ್ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನು ಹೊರತುಪಡಿಸಿದಂತೆ ಬೇರಾವುದೇ ಸಾಕ್ಷ್ಯ ಇಲ್ಲ’ ಎಂದು ಪ್ರತಿಪಾದಿಸಿದ್ದರು.
ಆದರೆ, ಪ್ರಾಸಿಕ್ಯೂಷನ್ ಪರ ವಕೀಲರು, ‘ಕಿರುಕುಳ ಮತ್ತು ಖಿನ್ನತೆಯ ಬಗ್ಗೆ ಮೊಬೈಲ್‌ನಲ್ಲಿ ಕಳುಹಿಸಿರುವ ಸಂದೇಶಗಳನ್ನು ಡೆತ್ ನೋಟ್ ಎಂದೇ ಪರಿಗಣಿಸಬೇಕಾಗುತ್ತದೆ. ಆರೋಪಿಗಳು ಧನಂಜಯ ಅವರಿಗೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದು ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು’ ಎಂದು ಆಕ್ಷೇಪಿಸಿದ್ದರು.
ಇದಕ್ಕೆ ನ್ಯಾಯಪೀಠ, ‘ಧನಂಜಯ, ಸಾವಿಗೆ ಶರಣಾಗುವ ಮುನ್ನ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತಿದ್ದರು. ಅದರಿಂದಾಗಿಯೇ ಖಿನ್ನತೆ ಜಾರಿದ್ದರು ಎಂಬುದೇನೋ ಸರಿ. ಆದರೆ, ಅವರು ತಮ್ಮ ಮೊಬೈಲ್ ಫೋನ್‌ನಿಂದ ಕಳುಹಿಸಿದ್ದ ವಾಟ್ಸ್ ಆ್ಯಪ್ ಸಂದೇಶವನ್ನು ಭೌತಿಕ ಸಾಕ್ಷ್ಯ ಎಂದು ಪರಿಗಣಿಸಬೇಕಾಗುತ್ತದೆಯೇ ಹೊರತು ಅದನ್ನೇ ಡೆತ್ ನೋಟ್ ಎಂದು ಪರಿಗಣಿಸಬೇಕು ಎಂಬ ವಾದ ವಿಚಿತ್ರ ಸಂಗತಿಯೇ ಸರಿ’ ಎಂಬ ಅಭಿಪ್ರಾಯದೊಂದಿಗೆ ಪ್ರಾಸಿಕ್ಯೂಷನ್ ವಾದವನ್ನು ತಳ್ಳಿ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.