ADVERTISEMENT

ನಾನು ಎಲ್ಲಿಗೆ ಹೋಗಲಿ? ಸಂಸದೆ ಸುಮಲತಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 16:16 IST
Last Updated 13 ಜುಲೈ 2021, 16:16 IST
ಸಂಸದೆ ಸುಮಲತಾ
ಸಂಸದೆ ಸುಮಲತಾ    

ಮಂಡ್ಯ: ‘ನಾನು ಲೋಕಸಭಾ ಅಧಿವೇಶನದಲ್ಲಿ ಇದ್ದಾಗ ಸುಮಲತಾ ಜಿಲ್ಲೆಗೆ ಬರುತ್ತಿಲ್ಲ ಎಂದು ಆರೋಪಿಸುತ್ತಾರೆ. ಜಿಲ್ಲೆಗೆ ಬಂದರೆ ನನ್ನ ವಿರುದ್ಧ ಟೀಕೆಗೆ ಇಳಿಯುತ್ತಾರೆ, ನಾನು ಎಲ್ಲಿಗೆ ಹೋಗಬೇಕು’ ಎಂದು ಸಂಸದೆ ಸುಮಲತಾ ಮಂಗಳವಾರ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾನು ಏನೇ ಮಾತನಾಡಿದರೂ ಅದಕ್ಕೆ ರಾಜಕೀಯ ಬಣ್ಣ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡಿದರೆ, ದುಡ್ಡು ವಸೂಲಿಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಯಾರಿಗೆ ಏನೇನು ಅಭ್ಯಾಸವಿದೆಯೋ ಅದನ್ನೇ ಆರೋಪಿಸುತ್ತಿದ್ದಾರೆ’ ಎಂದರು.

‘ನಾನು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಅಕ್ರಮ ಕಲ್ಲುಗಣಿಗಳ ಬಗ್ಗೆ ಯಾರೂ ಹೇಳಿರಲಿಲ್ಲ’ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ ‘ಅಕ್ರಮದ ವಿರುದ್ಧ ಪ್ರಶ್ನಿಸಿದರೆ ವಿವಿಧ ಪಕ್ಷಗಳ ಮುಖಂಡರು ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ಜನರು ಅವರಿಗೆ ಯಾಕೆ ಹೇಳಿರಲಿಲ್ಲವೋ ಗೊತ್ತಿಲ್ಲ. ಆದರೆ ನನಗೆ ಮೊದಲಿನಿಂದಲೂ ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ್ದಾರೆ’ ಎಂದರು.

ADVERTISEMENT

ನಟ ದರ್ಶನ್‌ಗೆ ಆಗಿರುವ ವಂಚನೆ ಪ್ರಕರಣ ಕುರಿತು ಮಾತನಾಡಿದ ಅವರು ‘ಆ ಪ್ರಕರಣದ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ, ಒಮ್ಮೆ ದರ್ಶನ್‌ ನಮ್ಮ ಮನೆಗೆ ಬಂದಿದ್ದಾಗ ದೊಡ್ಡ ವಿಷಯವೊಂದಿದೆ ಎಂದಷ್ಟೇ ಹೇಳಿದ್ದರು. ಅದರ ಪೂರ್ಣ ಮಾಹಿತಿ ಹೇಳಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.