ADVERTISEMENT

ಮೋದಿ, ಮೋದಿ ಕೂಗುತ್ತಿದ್ದವರು ಈಗೆಲ್ಲಿ: ಸಿದ್ದರಾಮಯ್ಯ ಪ್ರಶ್ನೆ

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 19:31 IST
Last Updated 13 ಆಗಸ್ಟ್ 2021, 19:31 IST
ರಕ್ಷಾ ರಾಮಯ್ಯ ಅವರಿಗೆ ಕಾಂಗ್ರೆಸ್ ಬಾವುಟವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‌ಸಿ) ಜಂಟಿ ಕಾರ್ಯದರ್ಶಿ ಕೃಷ್ಣ ಅಳ್ಳವರು ಹಸ್ತಾಂತರಿಸಿದರು. ಮಾಜಿ ಸಚಿವ ಎಂ.ಆರ್. ಸೀತಾರಾಂ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ
ರಕ್ಷಾ ರಾಮಯ್ಯ ಅವರಿಗೆ ಕಾಂಗ್ರೆಸ್ ಬಾವುಟವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‌ಸಿ) ಜಂಟಿ ಕಾರ್ಯದರ್ಶಿ ಕೃಷ್ಣ ಅಳ್ಳವರು ಹಸ್ತಾಂತರಿಸಿದರು. ಮಾಜಿ ಸಚಿವ ಎಂ.ಆರ್. ಸೀತಾರಾಂ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾವು ಹೋದ ಕಡೆಯಲ್ಲೆಲ್ಲಾ ಮೋದಿ, ಮೋದಿ ಎಂದು ಕೂಗುತ್ತಿದ್ದವರೆಲ್ಲಾ ಎಲ್ಲಿ ಹೋದರು, ಏನಾಯಿತು ಅವರ ಕತೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೋದಿ.. ಮೋದಿ ಎಂದು ಕುಣಿಯುತ್ತಿದ್ದ ಯುವ ಜನರು ಅವರ ಆಡಳಿತ ನೋಡಿ ಭ್ರಮನಿರಸನಗೊಂಡಿದ್ದಾರೆ’ ಎಂದರು.

‘ರಕ್ಷಾ ರಾಮಯ್ಯ ಅವರು ಸಜ್ಜನ, ಸಂಭಾವಿತ ಯುವ ನಾಯಕ. ಆದರೆ, ಕೋಮುವಾದಿಗಳನ್ನು ಖಂಡಿಸುವಾಗ ಆಕ್ರಮಣಕಾರಿಯಾಗಿ ಇರಬೇಕು. ಮೋದಿಯಷ್ಟು ಸುಳ್ಳು ಹೇಳುವ ಮತ್ತು ಜನರನ್ನು ಮೋಸ ಮಾಡುವವರು ಭಾರತದ ರಾಜಕಾರಣದಲ್ಲಿ ಬೇರಾರು ಇಲ್ಲ’ ಎಂದು ಟೀಕಿಸಿದರು.

ADVERTISEMENT

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಇತಿಹಾಸ ಓದಿಲ್ಲ. ಇತಿಹಾಸದ ಕನಿಷ್ಠ ಜ್ಞಾನ ಇದ್ದರೆ ದೇಶದ ಸ್ವಾತಂತ್ರ್ಯಕಾಗಿ ಪ್ರಾಣ ತೆತ್ತವರ ಬಗ್ಗೆ ಹಗುರವಾಗಿ ಮಾತನಾಡುತ್ತಿರಲಿಲ್ಲ.ಕೆ.ಎಸ್. ಈಶ್ವರಪ್ಪ ಅಂತವರನ್ನು ಪಕ್ಷದಲ್ಲಿ ಇಟ್ಟುಕೊಂಡು ಬಿಜೆಪಿಯವರು ಸಂಭಾವಿತರು, ಸುಸಂಸ್ಕೃತರು ಎಂದು ಹೇಳುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರು ಕಾಂಗ್ರೆಸ್ ಪಕ್ಷದವರು ಮಾತ್ರ. ಕಾಂಗ್ರೆಸಿಗ ಎಂಬುದೇ ಹೆಮ್ಮೆಪಡುವ ಸಂಗತಿ ಎಂದರು.

‘ನಮಗೆ ದೇಶಪ್ರೇಮದ ಪಾಠ ಮಾಡುವ ಬಿಜೆಪಿಯವರು ಎಂದಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಮಾಡಿದ್ದಾರೆಯೇ? ಮೊಘಲರು, ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು ಇದೇ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರು. ಟಿಪ್ಪು ಆಸ್ಥಾನದಲ್ಲಿ ಪೂರ್ಣಯ್ಯ ದಿವಾನರಾಗಿದ್ದರು. ಟಿಪ್ಪು ಜಯಂತಿ ವಿರೋಧ ಮಾಡುವವರು ಪೂರ್ಣಯ್ಯ ಮತ್ತು ಕೃಷ್ಣಸ್ವಾಮಿ ಅವರನ್ನು ಏಕೆ ವಿರೋಧಿಸುವುದಿಲ್ಲ. ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ’ ಎಂದರು.

‘ಯುವಕರು, ವಿದ್ಯಾರ್ಥಿಗಳು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳನ್ನು ಒಳಗೊಂಡ ಹೊಸ ಪಡೆ ಕಟ್ಟಬೇಕು’ ಎಂದು ರಕ್ಷಾ ರಾಮಯ್ಯ ಅವರಿಗೆ ತಿಳಿ ಹೇಳಿದರು.

‘ನೇರವಾಗಿ ವಿಧಾನಸೌಧ ನೋಡಬೇಡಿ’

‘ಯುವ ಮುಖಂಡರು ಬಂದ ಕೂಡಲೇ ವಿಧಾನಸೌಧವನ್ನೇ ನೋಡಬೇಡಿ. ಮೊದಲು ಜಿಲ್ಲಾ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಮೂಲಕ ರಾಜಕಾರಣ ಆರಂಭಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಯುವ ಮುಖಂಡರಿಗೆ ಕಿವಿಮಾತು ಹೇಳಿದರು.

‘ಜವಾಹರಲಾಲ್ ನೆಹರು ಅವರು ಮುನ್ಸಿಪಲ್ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಮುನ್ಸಿಪಲ್ ಸದಸ್ಯರಾಗಿದ್ದರು. ರಾಮಲಿಂಗಾರೆಡ್ಡಿ ಅವರು ಪಾಲಿಕೆ ಸದಸ್ಯರಾಗಿದ್ದರು. ಹೀಗೆ ಕೆಳ ಹಂತದಿಂದ ಒಂದೊಂದೇ ಹೆಜ್ಜೆ ಮೇಲೆ ಬರಬೇಕು’ ಎಂದು ತಿಳಿಸಿದರು.

‘ಮನಮೋಹನ ಸಿಂಗ್ ಮತ್ತು ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿದ್ದರೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ನಾವು ವಿಫಲರಾಗುತ್ತಿರಲಿಲ್ಲ. ಹೊಸ ತಲೆಮಾರಿನ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಪ್ರತಿ ಹಳ್ಳಿ, ಕಾಲೇಜುಗಳಿಗೆ ಹೋಗಿ ನಾಯಕರನ್ನು ಬೆಳಿಸಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.