ADVERTISEMENT

ನೆಹರೂ ಗುಣಗಾನ ಮಾಡಿದ ಸಿ.ಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 20:53 IST
Last Updated 14 ನವೆಂಬರ್ 2022, 20:53 IST
   

ಬೆಂಗಳೂರು: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನಡೆಸಿದ ಖ್ಯಾತಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಸಲ್ಲುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನೆಹರೂ ಅವರ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

‘ಮಹಾತ್ಮ ಗಾಂಧೀಜಿಯವರ ಜತೆ ನಿಕಟ ಸಂಬಂಧ ಹೊಂದಿದ್ದ ನೆಹರೂ, ಸ್ವಾತಂತ್ರ್ಯ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು. ಭಾರತದ ಉದಯಕ್ಕೆ ಬಹಳ ಶ್ರಮ ವಹಿಸಿದ್ದರು. ದೇಶದ
ಮೊದಲ ಪ್ರಧಾನಿಯಾಗಿ ನೆಹರೂ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದರು’ ಎಂದರು.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲಿಪ್ತ ಚಳವಳಿಯನ್ನು ಮುನ್ನಡೆಸಲು ಮಾರ್ಷಲ್‌ ಟಿಟೊ ಅವರೊಂದಿಗೆ ಸೇರಿ ನೆಹರೂ ಮಾಡಿರುವ ಕೆಲಸಗಳು ಅದ್ಭುತವಾದುವು. ಅಲಿಪ್ತ ಚಳವಳಿಯ ಮೂಲಕ ಭಾರತವು ಈಗಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ನೆಹರೂ ಕೊಡುಗೆ ಸ್ಮರಿಸಿದ ಪ್ರಧಾನಿ ಮೋದಿ
ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಥಮ ಪ್ರಧಾನಿಯ ಕೊಡುಗೆಯನ್ನು ಸ್ಮರಿಸಿದ್ದಾರೆ.

‘ದೇಶದ ಮಾಜಿ ಪ್ರಧಾನಿ ನೆಹರೂ ಅವರಿಗೆ ನನ್ನ ನಮನಗಳು. ದೇಶಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.