ADVERTISEMENT

ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ನಲ್ಲಿಯೇ ಇರುತ್ತಾರೆ: ಶಾಸಕ ಜಮೀರ್‌ ಅಹ್ಮದ್‌ ಖಾನ್‌

ಶಾಸಕ ಜಮೀರ್‌ ಅಹ್ಮದ್‌ ಖಾನ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 14:41 IST
Last Updated 13 ಫೆಬ್ರುವರಿ 2022, 14:41 IST
ಜಮೀರ್‌ ಅಹ್ಮದ್‌ ಖಾನ್‌
ಜಮೀರ್‌ ಅಹ್ಮದ್‌ ಖಾನ್‌   

ಹುಬ್ಬಳ್ಳಿ: ‘ಸಿ.ಎಂ. ಇಬ್ರಾಹಿಂ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕು ಎಂದು ನಾವು ಕೌನ್ಸಿಲ್‌ನಲ್ಲಿ ಚರ್ಚಿಸಿ ಹೈಕಮಾಂಡ್‌ಗೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ, ನಮ್ಮದು ಹೈಕಮಾಂಡ್‌ ಪಕ್ಷವಾಗಿದ್ದರಿಂದ, ಅಂತಿಮ ತೀರ್ಮಾನ ವರಿಷ್ಠರೇ ತೆಗೆದುಕೊಳ್ಳಬೇಕು’ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲವೆಂದು ಇಬ್ರಾಹಿಂ ಅವರು ಬೇಸರ ಪಟ್ಟುಕೊಂಡಿದ್ದು ನಿಜ, ಪಕ್ಷ ಬಿಡುವ ಬಗ್ಗೆ ಮಾತನಾಡಿರಬಹುದು. ಅದು ನಮಗೂ ನೋವಿನ ಸಂಗತಿ. ಅವರ ಜೊತೆ ಈಗಾಗಲೇ ಸಿದ್ದರಾಮಯ್ಯ ಹಾಗೂ ನಾವೆಲ್ಲ ಮಾತನಾಡಿದ್ದೇವೆ’ ಎಂದರು.

‘ಇಬ್ರಾಹಿಂ ಮತ್ತು ಸಿದ್ದರಾಮಯ್ಯರ ಸಂಬಂಧ ಗಟ್ಟಿಯಾಗಿದೆ. ಹಾಗಾಗಿ ಅವರು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಬಿಟ್ಟು ಎಲ್ಲೂ ಹೋಗಲ್ಲ. ಕಾಂಗ್ರೆಸ್‌ನಲ್ಲಿಯೇ ಇರುತ್ತಾರೆ. ಆ ಬಗ್ಗೆ ನನಗೆ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

‘ಸಿ.ಎಂ. ಇಬ್ರಾಹಿಂ ನಮ್ಮ ಸಮಾಜದ ಮುಖಂಡರು. ಅವರು ನಮ್ಮ ನಾಯಕರು. ಅವರ ರಾಜಕೀಯದ ಎದುರಿಗೆ ನಾನು ಚಿಕ್ಕವನು. ಹೀಗಿದ್ದಾಗ ನಾನು ಅವರಿಗೆ ಪರ್ಯಾಯ ಶಕ್ತಿಯಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎನ್ನುವ ಹೇಳಿಕೆಯಲ್ಲಿ ಹುರುಳಿಲ್ಲ’ ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನ ಮುಖಂಡರಲ್ಲಿ ಯಾವುದೇ ಒಡಕಿಲ್ಲ. ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಒಗ್ಗಟ್ಟಾಗಿದ್ದಾರೆ. ಆ ಕುರಿತು ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿಯಿಂದ ಜಾತಿ ರಾಜಕೀಯ: ಜಮೀರ್‌

‘ನೂರಾರು ವರ್ಷಗಳಿಂದ ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುತ್ತ ಬಂದಿದ್ದಾರೆ. ಆದರೆ, ಕಾಲೇಜಿನಲ್ಲಿ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಬಂದಂದಿನಿಂದ ಈ ಗೊಂದಲ ಆರಂಭವಾಗಿದೆ. ಮಕ್ಕಳ ಮೂಲಕ ಬಿಜೆಪಿ ಜಾತಿ ಬೀಜ ಬಿತ್ತಿಸಿ ರಾಜಕೀಯ ಮಾಡುತ್ತಿದೆ’ ಎಂದು ಶಾಸಕ ಜಮೀರ್‌ ಅಹ್ಮದ್‌ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಎಂದಿಗೂ ಮತ ಯಾಚಿಸಿಲ್ಲ. ಹಿಂದೂ–ಮುಸ್ಲಿಂ ನಡುವೆ ಒಡಕು ತಂದೇ ಅವರು ಗೆದ್ದು ಬರುತ್ತಿದ್ದಾರೆ. ಹಿಜಾಬ್‌ ಧರಿಸುವುದು ಮುಸ್ಲಿಮರ ಮೂಲ ಹಕ್ಕು. ನ್ಯಾಯಾಲಯಕ್ಕಿಂತ ದೊಡ್ಡವರು ಯಾರೂ ಇಲ್ಲ. ಹಿಜಾಬ್‌ ವಿಷಯ ಇದೀಗ ನ್ಯಾಯಾಲಯದಲ್ಲಿದೆ. ಅಲ್ಲಿ ನಮ್ಮ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.