ADVERTISEMENT

ಚಾಲಕ ಹೃದಯಾಘಾತದಿಂದ ಸತ್ತರೂ ವಿಮೆ: ಹೈಕೋರ್ಟ್‌

ಹೈಕೋರ್ಟ್‌ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 16:42 IST
Last Updated 26 ಡಿಸೆಂಬರ್ 2018, 16:42 IST
ಹೈಕೋರ್ಟ್‌ (ಸಂಗ್ರಹ ಚಿತ್ರ)
ಹೈಕೋರ್ಟ್‌ (ಸಂಗ್ರಹ ಚಿತ್ರ)   

ಬೆಂಗಳೂರು: ಕರ್ತವ್ಯ ನಿರ್ವಹಣೆ ವೇಳೆ ವಾಹನ ಚಾಲಕ ಹೃದಯಾಘಾತದಿಂದ ಮೃತಪಟ್ಟರೂ ಆ ವಾಹನಕ್ಕೆ ವಿಮಾ ರಕ್ಷೆ ಒದಗಿಸಿರುವ ಕಂಪನಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ.

ಮುಝೀಬ್‌ ಖಾನ್‌ ಎಂಬುವರಿಗೆ ಸೇರಿದ ಲಾರಿಯಲ್ಲಿ ಚಿತ್ರದುರ್ಗದ ನಿವಾಸಿ ಅಂಜನ್‌ ಕುಮಾರ್‌ ಚಾಲಕರಾಗಿದ್ದರು. 2007ರಲ್ಲಿ ನುಗ್ಗೇನಹಳ್ಳಿಯಿಂದ ಮಂಗಳೂರಿಗೆ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಲಾರಿ ಬೈರಾಪುರ ಬಳಿ ಪಂಕ್ಚರ್‌ ಆಗಿತ್ತು. ಲಾರಿಯನ್ನು ರಸ್ತೆಬದಿ ನಿಲ್ಲಿಸಿದ್ದ ಅವರು ಹೋಟೆಲ್‌ನಲ್ಲಿ ಆಹಾರ ಸೇವಿಸಿ, ಮರದ ಬುಡದಲ್ಲಿ ಕುಳಿತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು.

ಮೃತರ ಕುಟುಂಬಕ್ಕೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಪರಿಹಾರ ಒದಗಿಸುವಂತೆ ಲಾರಿ ಮಾಲೀಕ ಹಾಗೂ ವಿಮಾ ಕಂಪನಿಗೆ ಆದೇಶಿಸುವಂತೆ ಕೋರಿ ಮೃತರ ಪತ್ನಿ ರೇಣುಕಮ್ಮ ಕಾರ್ಮಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅಂಜನ್‌ ಕುಮಾರ್‌ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊನೆಯುಸಿರೆಳೆದ ಕಾರಣ ಆತನ ಕುಟುಂಬದವರಿಗೆ ನ್ಯಾಷನಲ್‌ ಇನ್ಶೂರನ್ಸ್‌ ಕಂಪನಿಯು ₹ 3.84 ಲಕ್ಷ ಪರಿಹಾರವನ್ನು ವಾರ್ಷಿಕ ಶೇ.12ರಷ್ಟು ಬಡ್ಡಿಸಮೇತ ನೀಡಬೇಕು ಎಂದು ಕಾರ್ಮಿಕ ಆಯುಕ್ತರು 2010ರ ಏ.13ರಂದು ಆದೇಶ ಮಾಡಿದ್ದರು.

ADVERTISEMENT

ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ‘ವಾಹನಕ್ಕೆ ವಿಮೆ ಮಾಡಿಸಿದ್ದ ಪಕ್ಷದಲ್ಲಿ ವಿಮಾ ಕಂಪನಿಯು ಅಪಘಾತದಲ್ಲಿ ಗಾಯಗೊಂಡವರಿಗೆ, ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಪರಿಹಾರ ಒದಗಿಸಬೇಕಾಗುತ್ತದೆ. ಅಪಘಾತದಲ್ಲಿ ಯಾರಾದರೂ ಮೃತಪಟ್ಟವರೆ ಅವರ ಕುಟುಂಬದವರಿಗೆ ಪರಿಹಾರ ನೀಡುವ ಹೊಣೆ ವಿಮಾ ಕಂಪನಿಯದಾಗಿರುತ್ತದೆ. ಆದರೆ, ಅಂಜನ್‌ ಕುಮಾರ್‌ ಅವರದು ಸಹಜ ಸಾವು. ಹಾಗಾಗಿ ಕಾರ್ಮಿಕ ಆಯುಕ್ತರು ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು’ ಎಂದು ಕೋರಿತ್ತು.

ವಿಮಾ ಕಂಪನಿಯ ವಾದವನ್ನು ಒಪ್ಪದ ಹೈಕೋರ್ಟ್‌ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ, ‘ವಾಹನ ಚಾಲಕರು ತುಂಬಾ ಒತ್ತಡದಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ಚಕ್ರ ಪಂಕ್ಚರ್‌ ಆಗಿದ್ದ ಸಂದರ್ಭದಲ್ಲಿ ಚಾಲಕ ಲಾರಿಯನ್ನು ನಿಲ್ಲಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಹಾಗಾಗಿ ಇದು ಕರ್ತವ್ಯದ ಅವಧಿಯಲ್ಲೇ ಉಂಟಾದ ಸಾವು’ ಎಂದು ಅಭಿಪ್ರಾಯಪಟ್ಟಿದೆ. ಕಾರ್ಮಿಕ ಆಯುಕ್ತರ ಆದೇಶವನ್ನು ಎತ್ತಿಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.