ADVERTISEMENT

ಗೋಲಿಬಾರ್‌ನಲ್ಲಿ ಸತ್ತವರು ಅಮಾಯಕರಲ್ಲ: ಗೋವಿಂದ ಕಾರಜೋಳ

ಉದ್ಧವ್ ಠಾಕ್ರೆ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 12:54 IST
Last Updated 22 ಡಿಸೆಂಬರ್ 2019, 12:54 IST
   

ಬೆಳಗಾವಿ: ‘ಮಂಗಳೂರಿನಲ್ಲಿ ಅಮಾಯಕರನ್ನು ಗೋಲಿಬಾರ್ ಮಾಡಿ ಸಾಯಿಸಿಲ್ಲ. ಯಾರು ದೇಶ ದ್ರೋಹ ಮತ್ತು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದರೋ ಅವರನ್ನು ಪೊಲೀಸರು ಹತ್ತಿಕ್ಕುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ನವರು ಹೀನ ಹಾಗೂ ಮತ ಬ್ಯಾಂಕ್‌ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ಮಂಗಳೂರು ಗೋಲಿಬಾರ್ ವಿಚಾರದಲ್ಲೂ ಕಾಂಗ್ರೆಸ್ ‌ತನ್ನ ನೀತಿ ಮುಂದುವರಿಸಿದೆ. ಬಿಜೆಪಿಯ ನಾವು ದೇಶದ ಐಕ್ಯತೆ, ಭದ್ರತೆ ಕುರಿತು ಚಿಂತನೆ ಮಾಡುತ್ತಿದ್ದೇವೆ’ ಎಂದರು.

ಮಹದಾಯಿ ವಿಷಯದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂಬ ಹೋರಾಟಗಾರರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಹೋರಾಟ ಮಾಡುವವರು ಮಾಡಿಕೊಳ್ಳಲಿ, ಯಾರು ಬೇಡ ಅಂದಿದ್ದಾರೆ? ಆದರೆ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಶೀಘ್ರವೇ ಸಿಹಿ ಸುದ್ದಿ ಕೊಡುತ್ತೇವೆ ಎಂದಿದ್ದಾರೆ. ಹೀಗಾಗಿ, ಸಂತೋಷದಿಂದ ಇರೋಣ’ ಎಂದು ಹೇಳಿದರು.

ADVERTISEMENT

‘ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶಗಳು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದಲ್ಲಿವೆ’ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಯನ್ನು ಖಂಡಿಸಿದ ಅವರು, ‘ಈ ಭೂಮಿ ಮೇಲೆ ಜನ ಇರುವವರೆಗೂ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಕರ್ನಾಟಕದಲ್ಲಿ ಇರುತ್ತವೆ. ಯಾವ ಉದ್ಭವ್‌ ಠಾಕ್ರೆ ಹೇಳಿದರೂ ಅದು ಕನ್ನಡ ನಾಡಾಗಿಯೇ ಇರುತ್ತದೆ’ ಎಂದು ತಿರುಗೇಟು ನೀಡಿದರು.

‘ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಅದಕ್ಕಾಗಿ ಸ್ವಲ್ಪ ಕಾಯಬೇಕು. ಪ್ರಧಾನಿ‌ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಡಿಸಿಎಂ ಹುದ್ದೆ ಇರಬೇಕೋ, ಬೇಡವೋ ಎನ್ನುವ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಕೇಳಿದರೆ ಪ್ರತಿಕ್ರಿಯೆ ನೀಡುತ್ತೇನೆ. ಹಾದಿ, ಬೀದಿಯಲ್ಲಿ ಹೇಳಿಕೆ ಕೊಡುವವರಿಗೆ ನಾನೇಕೆ ಪ್ರತಿಕ್ರಿಯಿಸಿಲಿ’ ಎನ್ನುವ ಮೂಲಕ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.