ಬಾಗಲಕೋಟೆ: ‘ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲಂದ್ರ ಇಲ್ಲಿ ಯಾಕ ನಿಲ್ಲಬೇಕು? ನಮಗ ಯಾಕ ಗಂಟ ಬಿದ್ರಿ ನೀವು’ ಎಂದು ವಿಧಾನ ಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೋಮವಾರ ನೇರವಾಗಿಯೇ ಪ್ರಶ್ನಿಸಿದರು.
ಬಾದಾಮಿಯಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಎದುರೇ ಅವರು ಆಕ್ರೋಶ ಹೊರಹಾಕಿದರು.
ಕಳೆದ ಚುನಾವಣೆ ಯಲ್ಲಿಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಬೆಳಿಗ್ಗೆಯಷ್ಟೇ ಸಿದ್ದರಾಮಯ್ಯ ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ಭಾಷಣದಲ್ಲಿ ವಿರೋಧ ವ್ಯಕ್ತಪಡಿಸಿದರು. ಚಿಮ್ಮನಕಟ್ಟಿ ಭಾಷಣ ಆರಂಭಿಸುತ್ತಿದ್ದಂತೆಯೇ ಬೆಂಬಲಿಗರು ‘ಹೌದಾ ಹುಲಿಯಾ’ ಎಂದು ಕೂಗಿದರು.
ಅದಕ್ಕೆ ಚಿಮ್ಮನಕಟ್ಟಿ ಅವರು, ‘ನಾನು ಮೊದಲು ಹುಲಿ ಆಗಿದ್ದೆ. ಈಗ ಇಲಿ ಮಾಡ್ಯಾರ. ನೀವು (ಬೆಂಬಲಿಗರು) ಮನಸ್ಸು ಮಾಡಿದರ ಮತ್ತ ಹುಲಿ ಅಕ್ಕೀನಿ. ಮಂತ್ರಿ ಅಕ್ಕೀನಿ, ಮುಖ್ಯ ಮಂತ್ರಿನೂ ಆಕ್ಕೀನಿ’ ಎಂದರು. ಆಗ ಬೆಂಬಲಿಗರು ಚಪ್ಪಾಳೆ, ಕೇಕೆ ಹಾಕಿದರು.
‘ಮುಂದಿನ ಸಲ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಹಿಂದಿನ ಚುನಾವಣೆಯಲ್ಲಿ ಅವರ ಪುತ್ರನ ಬದಲು ಸಿದ್ದರಾಮಯ್ಯಗೆ ಆ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದರೆ ಅವರು ಗೆಲ್ಲುತ್ತಿದ್ದರು. ಪುತ್ರನ ಕಾರಣಕ್ಕೆ ವರುಣಾ ಕ್ಷೇತ್ರ ಬಿಟ್ಟರು. ಅವರು ಅಲ್ಲಿಯೇ ಸ್ಪರ್ಧಿಸಬೇಕಪ್ಪ.ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆಲ್ಲಬೇಕು. ಇಲ್ಲಿಗೆ ಬಂದರೆ ನಾನೇನು ಮಾಡಬೇಕು?’ ಎಂದರು.
ಇದರಿಂದ ವೇದಿಕೆಯಲ್ಲಿದ್ದ ಸಿದ್ದರಾಮಯ್ಯಗೆ ಮುಜುಗರ ಉಂಟಾಯಿತು. ಈ ವೇಳೆ ಪಕ್ಷದ ಮುಖಂಡ ಎಂ.ಜಿ.ಕಿತ್ತಲಿ ಸಮಾಧಾನಪಡಿಸಲು ಮುಂದಾದರು. ಆಗ ಚಿಮ್ಮನಕಟ್ಟಿ ಮತ್ತಷ್ಟು ಕೋಪಗೊಂಡರು. ಇದರಿಂದ ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.