ADVERTISEMENT

ಬೆಂಗಳೂರಿಗರ ಬಗ್ಗೆ ಕೋಪ ಏಕೆ: ಡಿಕೆಶಿಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 17:27 IST
Last Updated 23 ಆಗಸ್ಟ್ 2024, 17:27 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಜನರ ಬಗ್ಗೆ ಉದ್ಧಟತನದ ಮಾತುಗಳನ್ನು ಆಡಿದ್ದು, ಅವರು ಬೆಂಗಳೂರಿಗರ ಕ್ಷಮೆ ಕೇಳಬೇಕು ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಜನರಿಗೆ ಕೃತಜ್ಞತೆ ಇಲ್ಲ; ವಿಪಕ್ಷಗಳು ಎಷ್ಟೇ ಬೈದರೂ, ಪತ್ರಕರ್ತರು ಎಷ್ಟೇ ಬೈದರೂ ನೀರಿನ ದರ ಏರಿಸದೆ ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಇದರಿಂದ ಇವರಿಗೆ ಬೆಂಗಳೂರಿನ ಜನರ ಬಗ್ಗೆ ವಿಪರೀತ ಸಿಟ್ಟು ಇದೆ ಎಂಬುದು ಗೊತ್ತಾಗುತ್ತದೆ’ ಎಂದರು. 

‘ಬೆಂಗಳೂರಿನ ನಾಗರಿಕರು ಹೆಚ್ಚು ತೆರಿಗೆ ಪಾವತಿಸುತ್ತಾರೆ. ಆದರೆ, ಸವಲತ್ತುಗಳನ್ನು ಕೇಳಬಾರದೆ? ಇಲ್ಲಿನ ಜನರ ಬಗ್ಗೆ ಉಗ್ರವಾಗಿ ಮಾತನಾಡುವ ನಿಮ್ಮ ಅವಶ್ಯಕತೆ ಬೆಂಗಳೂರಿನ ಜನತೆಗೆ ಇದೆಯೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಅಧಿಕೃತ ತೆರಿಗೆಗಳ ಜತೆಗೆ ಅನಧಿಕೃತವಾಗಿ ‘ಚದರಡಿ ಟ್ಯಾಕ್ಸ್‌’ ಕೂಡ ಹಾಕಿದ್ದೀರಲ್ಲವೆ? ಅವರಿಗೆ ಉತ್ತಮ ರಸ್ತೆ, ಸಮರ್ಪಕ ಚರಂಡಿ ಸೌಲಭ್ಯ ಸೇರಿ ಎಲ್ಲ ಸವಲತ್ತು ಕೊಟ್ಟು ಜನರನ್ನು ಸಮಾಧಾನಪಡಿಸಬೇಕಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.