ಬೆಂಗಳೂರು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಝಡ್‌ಪ್ಲಸ್ ಭದ್ರತೆ ನೀಡಿರುವುದು ಎಷ್ಟು ಸರಿ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಉನ್ನತ ಸ್ಥಾನದಲ್ಲಿರುವ ಜನಪ್ರತಿನಿಧಿಗಳಿಗೆ ಝಡ್‌ಪ್ಲಸ್ ಭದ್ರತೆ ನೀಡಲಾಗುತ್ತದೆ. ಆರ್‌ಎಸ್‌ಎಸ್ ನೋಂದಣಿಯೇ ಆಗದ ಸಂಘಟನೆ. ಅಂತಹ ಸಂಘಟನೆಯ ಮುಖ್ಯಸ್ಥರ ಭದ್ರತೆಗೆ ಸಾರ್ವಜನಿಕರ ತೆರಿಗೆ ಹಣ ವ್ಯಯ ಮಾಡಲಾಗುತ್ತಿದೆ ಎಂದರು.
ಸರ್ದಾರ್ ವಲ್ಲಭಾಬಾಯಿ ಪಟೇಲರನ್ನು ಅನುಸರಿಸಲು ಹೊರಟಿರುವ ಈಗಿನ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಅಂಬೇಡ್ಕರ್‌ರವರ ಕುರಿತು ಆಡಿದ ಮಾತುಗಳು ಸಂಘ ಪರಿವಾರದ ಗುಪ್ತ ಕಾರ್ಯಸೂಚಿ. ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದರೆ ಎಳಸು ಹೇಳಿಕೆ ನೀಡುತ್ತಿರಲಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ಎರಡೂ ಅಂಬೇಡ್ಕರ್ ಹಾಗೂ ಸಂವಿಧಾನದ ವಿರೋಧಿಗಳು. ಸಂವಿಧಾನ, ರಾಷ್ಟ್ರಧ್ವಜ ಒಪ್ಪದವರು, ರಾಮಮಂದಿರ ಸ್ಥಾಪನೆಯ ದಿನವನ್ನೇ ಸ್ವಾತಂತ್ರ್ಯ ಎನ್ನುವವರು ಭಾರತದ ತಾಲಿಬಾನಿಗಳು ಎಂದು ದೂರಿದರು.
ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಪಕ್ಷದ ಸಂಬಂಧ ಸಂಕೀರ್ಣವಾದುದು. ಪಕ್ಷ ಅವರನ್ನು ಅಪ್ಪಿಕೊಂಡಿದೆ. ಒಂದೇ ಸಾಲಿನಲ್ಲಿ ಅವರ ಮತ್ತು ಕಾಂಗ್ರೆಸ್ ಸಂಬಂಧ ಬಣ್ಣಿಸಲು ಸಾಧ್ಯವಿಲ್ಲ. ಈ ಕುರಿತು ಬಿಜೆಪಿ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಂಬೇಡ್ಕರ್ ಎಂದೂ ಮನುವಾದಿಗಳ ಪರ ಇರಲಿಲ್ಲ. ಮನುಸ್ಮೃತಿ ಸುಡುವ ಮೂಲಕ ಅವರು ಸನಾತನಿಗಳ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದರು ಎಂದರು.
ಬಿ.ಎಸ್. ಯಡಿಯೂರಪ್ಪ ನಾಗಪುರ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿ. ಅಲ್ಲಿ ಪಡೆದ ಸುಳ್ಳಿನ ತರಬೇತಿಯನ್ನು ರಾಜ್ಯದಲ್ಲಿ ಪ್ರಯೋಗಿಸುತ್ತಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಅವರು ಹೊಸದಾಗಿ ಬಿಜೆಪಿಗೆ ಸೇರಿದ್ದಾರೆ. ಅವರು ಸರ್ವಪಕ್ಷ ಸದಸ್ಯರು. ಅವರ ಟೀಕೆಗೆ ಮನ್ನಣೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.