ADVERTISEMENT

ರಘುವನಹಳ್ಳಿಯಲ್ಲಿ ಕಾಣಿಸಿಕೊಂಡ ಪುನುಗು ಬೆಕ್ಕು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:37 IST
Last Updated 28 ಸೆಪ್ಟೆಂಬರ್ 2021, 17:37 IST

ಬೆಂಗಳೂರು: ‘ಹೆಮ್ಮಿಗೆಪುರ ವಾರ್ಡ್‌ನ ರಘುವನಹಳ್ಳಿಯ ಸಮೀಪ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡಿರುವ ಪ್ರಾಣಿಯು ಚಿರತೆಯಲ್ಲ. ಅದು ಪುನುಗು ಬೆಕ್ಕು. ಅದರಿಂದ ಯಾವುದೇ ಅಪಾಯವಿಲ್ಲ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು’ ಎಂದುಕಗ್ಗಲಿಪುರ ಆರ್‌ಎಫ್‌ಒ ಗೋಪಾಲ್‌ ಹೇಳಿದರು.

‘ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಚಿರತೆ ಓಡಾಡಿರುವ ಯಾವ ಕುರುಹೂ ಪತ್ತೆಯಾಗಿಲ್ಲ. ಮಂಗಳವಾರ ಬೆಳಿಗ್ಗೆ ಸ್ಥಳೀಯರೊಬ್ಬರು ಪ್ರಾಣಿಯೊಂದು ಓಡಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ನಮಗೆ ಕಳುಹಿಸಿದ್ದರು. ಅದು ಪುನುಗು ಬೆಕ್ಕು ಎಂಬುದು ಖಾತರಿಯಾಗಿದೆ. ಈ ಬೆಕ್ಕು ಚಿರತೆಯ ರೀತಿಯಲ್ಲೇ ಕಾಣುತ್ತದೆ. ಹೀಗಾಗಿ ಜನ ಗಾಬರಿಗೊಂಡಿದ್ದರು’ ಎಂದರು.

‘ಒಂದೊಮ್ಮೆ ಚಿರತೆ ಬಂದಿದ್ದರೆ ನಾಯಿ ಅಥವಾ ಇತರ ಪ್ರಾಣಿಗಳನ್ನು ಬೇಟೆಯಾಡಿರುತ್ತದೆ. ಸುತ್ತಲಿನ ಪ್ರದೇಶಗಳಲ್ಲಿ ನಾಯಿ ಅಥವಾ ಸಾಕು ಪ್ರಾಣಿಗಳು ಕಾಣೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಚಿರತೆಯ ಚಲನವಲನ ಕಂಡುಬಂದರೆ ಕೂಡಲೇ ಮಾಹಿತಿ ರವಾನಿಸುವಂತೆ ಸ್ಥಳೀಯರಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

ADVERTISEMENT

‘ಮೂರು ವಾರಗಳ ಹಿಂದೆ ಬಡಾವಣೆಯ 1ನೇ ಮುಖ್ಯರಸ್ತೆಯ ಸಮೀಪ ಚಿರತೆಯನ್ನೇ ಹೋಲುವ ಪ್ರಾಣಿಯೊಂದು ಕಾಣಿಸಿಕೊಂಡಿತ್ತು. ಮಂಗಳವಾರ ಬೆಳಿಗ್ಗೆ ಮತ್ತೆ ಕಾಣಿಸಿಕೊಂಡಿದೆ. ಅದು ಚಿರತೆಯೇ ಇರಬಹುದೆಂದು ನಾವೆಲ್ಲಾ ಹೆದರಿದ್ದೆವು. ವಾಟ್ಸ್‌ಆ್ಯಪ್‌ ಮೂಲಕ ನಿವಾಸಿಗಳಿಗೆಲ್ಲಾ ಈ ಮಾಹಿತಿ ರವಾನಿಸಿದ್ದೆವು. ಬಡಾವಣೆಯ ಸನಿಹದಲ್ಲೇ ತುರಹಳ್ಳಿ ಅರಣ್ಯವಿದೆ. ಅಲ್ಲಿಂದ ಅದು ಬಂದಿರಬಹುದು’ ಎಂದು ಸ್ಥಳೀಯ ನಿವಾಸಿ ಶ್ರೀಹರ್ಷ ಸುಬ್ಬಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.