ADVERTISEMENT

ಅನಾಥ ಮಕ್ಕಳ ಪೋಷಣೆಗೆ ವಿಶೇಷ ಯೋಜನೆ: ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 22:12 IST
Last Updated 9 ಜುಲೈ 2021, 22:12 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಬೆಂಗಳೂರು: ಕೋವಿಡ್‌ನಿಂದ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಪೋಷಣೆಗೆ ವಿಶೇಷ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

‌ಕೊರೊನಾ ವೈರಾಣು ಸೋಂಕಿನ ಮೂರನೇ ಅಲೆ ತಡೆಯುವುದು ಮತ್ತು ಅನಾಥ ಮಕ್ಕಳ ಪೋಷಣೆ ಕುರಿತು ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಕೋವಿಡ್‌ನಿಂದ ಅನಾಥರಾದ ಮಕ್ಕಳ ಪೋಷಣೆಯ ಹೊಣೆಗಾರಿಕೆ ನಿರ್ವಹಿಸಲು ಅನೇಕ ಮಠಾಧೀಶರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಯಾರಿಂದಲೂ ನೆರವು ದೊರೆಯದಿದ್ದರೆ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತುಕೊಳ್ಳಲಿದೆ. ಅದಕ್ಕಾಗಿ ಯೋಜನೆಯೊಂದನ್ನು ಜಾರಿಗೊಳಿಸಲಾಗುವುದು’ ಎಂದರು.

ಅನಾಥ ಮಕ್ಕಳ ಪೋಷಣೆಗೆ ಪ್ರತಿ ತಿಂಗಳು ₹ 3,500 ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿದೆ. ಈ ಮಕ್ಕಳ ಶಿಕ್ಷಣಕ್ಕೂ ಸರ್ಕಾರವೇ ವ್ಯವಸ್ಥೆ ಮಾಡಲಿದೆ. ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಕೋವಿಡ್‌ ಮೂರನೇ ಅಲೆ ತಡೆಯುವುದಕ್ಕೆ ಸಿದ್ಧತೆಗಳನ್ನು ಆರಂಭಿಸಬೇಕು. ಪ್ರತಿ ಜಿಲ್ಲೆಯಲ್ಲೂ ವಿಶೇಷ ತಂಡಗಳನ್ನು ರಚಿಸಿ, ಕಾರ್ಯಪ್ರವೃತ್ತರಾಗಬೇಕು. ಮಕ್ಕಳನ್ನು ಕೋವಿಡ್‌ ಸೋಂಕಿನ ಅಪಾಯದಿಂದ ಪಾರುಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.