ADVERTISEMENT

ವರ್ಗಾವಣೆಗೆ ಇನ್ನು ಕಡಿವಾಣ: ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 16:18 IST
Last Updated 26 ಏಪ್ರಿಲ್ 2022, 16:18 IST
ಡಾ.ಕೆ.ಸುಧಾಕರ್‌ 
ಡಾ.ಕೆ.ಸುಧಾಕರ್‌    

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಈ ವರ್ಷ ಮಾರ್ಗಸೂಚಿಯ ಪ್ರಕಾರವೇ ಅಧಿಕಾರಿಗಳು, ಸಿಬ್ಬಂದಿಯ ವರ್ಗಾವಣೆ ಮಾಡಲಾಗುವುದು. ಹಿಂದಿನಂತೆ ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ (ಡಿಎಚ್‌ಒ) ಸಭೆಯಲ್ಲಿ ಮಾತನಾಡಿದ ಅವರು, ‘ಮಾರ್ಗಸೂಚಿಯ ಪ್ರಕಾರ, ಶೇಕಡ 15ರಷ್ಟು ಮಂದಿಯ ವರ್ಗಾವಣೆಗೆ ಮಾತ್ರ ಅವಕಾಶ ನೀಡಲಾಗುವುದು. ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು’ ಎಂದರು.

ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು ನಗರ ಬಿಟ್ಟು ಹೊರ ಹೋಗುತ್ತಿಲ್ಲ. ಅದನ್ನು ತಡೆಯಲು ಪರಸ್ಪರ ಕೋರಿಕೆ ವರ್ಗಾವಣೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.

ADVERTISEMENT

ಪ್ರತಿ ಬುಧವಾರ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳು ಮತ್ತು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ. ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ಕಾರ್ಯನಿರ್ವಹಣೆ ಕುರಿತು ದಿನಚರಿ ದಾಖಲಿಸುವುದನ್ನೂ ಕಡ್ಡಾಯ ಮಾಡಲಾಗುವುದು ಎಂದರು.

ಡಿಎಚ್‌ಒಗಳೇ ಹೊಣೆ: ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ಜವಾಬ್ದಾರಿ ಡಿಎಚ್‌ಒಗಳಿಗೆ ಸೇರಿದ್ದು. ಯಾವುದೇ ಜಿಲ್ಲೆಯಲ್ಲಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿನ್ನಡೆ ಆದರೆ ಡಿಎಚ್‌ಒಗಳನ್ನೇ ಹೊಣೆ ಮಾಡಲಾಗುವುದು ಎಂದು ಸುಧಾಕರ್‌ ಎಚ್ಚರಿಕೆ ನೀಡಿದರು.

ಯಾದಗಿರಿ, ಕೊಪ್ಪಳ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ ಕಡಿಮೆ ಇದೆ. ಜೂನ್‌ 30ರೊಳಗೆ ಎಲ್ಲ ಯೋಜನೆಗಳಲ್ಲೂ ಶೇಕಡ 80ರಷ್ಟು ಪ್ರಗತಿ ಸಾಧಿಸಬೇಕು. ‘ಸಿಸೇರಿಯನ್‌’ ಹೆರಿಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಡಯಾಲಿಸಿಸ್‌ ಕೇಂದ್ರಗಳಲ್ಲಿ ಉತ್ತಮ ಸೇವೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.