ADVERTISEMENT

‘ಅನುಗ್ರಹ’ ಯೋಜನೆ ಜಾರಿಗಾಗಿ ಸದನದಲ್ಲಿ ಹೋರಾಟ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 3:33 IST
Last Updated 2 ಮಾರ್ಚ್ 2021, 3:33 IST
ಕುರಿಗಳು ಮೃತಪಟ್ಟಾಗ ಅವುಗಳ ಮಾಲೀಕರಿಗೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯನ್ನು ಮತ್ತೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾಮಂಡಳದ ವತಿಯಿಂದ ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್‌.ಎಂ. ರೇವಣ್ಣ, ಟಿ.ಬಿ. ಜಯಚಂದ್ರ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ
ಕುರಿಗಳು ಮೃತಪಟ್ಟಾಗ ಅವುಗಳ ಮಾಲೀಕರಿಗೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯನ್ನು ಮತ್ತೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾಮಂಡಳದ ವತಿಯಿಂದ ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್‌.ಎಂ. ರೇವಣ್ಣ, ಟಿ.ಬಿ. ಜಯಚಂದ್ರ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ನೈಸರ್ಗಿಕ ವಿಪತ್ತು ಮತ್ತು ಅಪಘಾತಗಳಂತಹ ಘಟನೆಗಳಲ್ಲಿ ಕುರಿಗಳು ಸತ್ತಾಗ ಅವುಗಳ ಮಾಲೀಕರಿಗೆ ತಲಾ ₹ 5,000 ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯನ್ನು ಪುನಃ ಜಾರಿಗೊಳಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲೂ ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

‘ಅನುಗ್ರಹ’ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾಮಂಡಳದ ವತಿಯಂದ ನಗರದ ಮೌರ್ಯ ವೃತ್ತದಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕುರಿಗಳು ಸತ್ತಾಗ ₹ 5,000 ಮತ್ತು ದನ, ಎಮ್ಮೆ ಸತ್ತರೆ ₹ 10,000 ಪರಿಹಾರ ನೀಡುವ ಯೋಜನೆಯನ್ನು ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿದೆ. ₹ 30 ಕೋಟಿಯಷ್ಟು ಹಳೆ ಬಾಕಿಯನ್ನೂ ಬಿಡುಗಡೆ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುರಿ ಸಾಕಣೆ ಕುರುಬ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲವು ಸಮುದಾಯಗಳ ಜನರು ಕುರಿ ಸಾಕಣೆಯನ್ನು ಮಾಡುತ್ತಿದ್ದಾರೆ. ಶಾಸಕ ಕೆ.ಆರ್‌.‌ ರಮೇಶ್‌ ಕುಮಾರ್‌ ಕೂಡ ತಮ್ಮ ತೋಟದಲ್ಲಿ 500 ಕುರಿಗಳನ್ನು ಸಾಕುತ್ತಿದ್ದಾರೆ. ಕುರಿ ಸಾಕಣೆ ದೊಡ್ಡ ಸಂಖ್ಯೆಯ ಜನರಿಗೆ ಬದುಕಿನ ದಾರಿಯಾಗಿದೆ. ಕುರಿಗಳು ಸತ್ತಾಗ ಅವರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಅವರಿಗೆ ಶಕ್ತಿ ತುಂಬುವುದಕ್ಕಾಗಿ ತಮ್ಮ ಅವಧಿಯಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ತಾವು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುವವರೆಗೂ ಯಡಿಯೂರಪ್ಪ ಅವರಿಗೆ ಯೋಜನೆಯ ಹಸೆರೇ ಗೊತ್ತಿರಲಿಲ್ಲ ಎಂದು ಟೀಕಿಸಿದರು.

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಅನುಗ್ರಹ ಯೋಜನೆಯಡಿಯಲ್ಲಿ ನೀಡುವ ಪರಿಹಾರದ ಮೊತ್ತವನ್ನು ₹ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಟಿ.ಬಿ. ಜಯಚಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.