ಬಸವರಾಜು ವಿ.ಶಿವಗಂಗಾ, ಸಿದ್ದರಾಮಯ್ಯ
ದಾವಣಗೆರೆ: ದಶಕದ ಹಿಂದೆ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ) ಸಾಕಷ್ಟು ಗೊಂದಲದಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ತಿಳಿಸಿದರು.
‘ಜಾತಿ ಜನಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ತಳೆದಿರುವ ನಿಲುವಿಗೆ ನಾನೂ ಬದ್ಧನಾಗಿದ್ದೇನೆ. ಸರ್ಕಾರ ವರದಿ ಹೊರತರುವುದಕ್ಕೂ ಮುನ್ನ ಚರ್ಚಿಸಬೇಕಿತ್ತು. ವರದಿ ಬಿಡುಗಡೆಗೊಳಿಸಿ ತಿದ್ದುಪಡಿಗೆ ಮುಂದಾದರೆ ಸರ್ಕಾರಕ್ಕೆ ಮುಜುಗರ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸಾದರ ಲಿಂಗಾಯತ ಸಮುದಾಯ 67 ಸಾವಿರ ಇದೆ ಎಂಬುದಾಗಿ ಸಮೀಕ್ಷೆ ಹೇಳುತ್ತಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಅಂದಾಜು 60 ಸಾವಿರ ಸಾದರ ಲಿಂಗಾಯತ ಸಮುದಾಯವಿದೆ. ಯಾವ ರೀತಿಯಲ್ಲಿ ಗಣತಿ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ 1.25 ಕೋಟಿ ಇದೆ. ಯಾವ ಜಾತಿಯ ಜನರ ಸಂಖ್ಯೆ ಎಷ್ಟಿದೆ ಎಂಬುದನ್ನು ಪಾರದರ್ಶಕವಾಗಿ ನೀಡಿದರೆ ಅನುಕೂಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.