ADVERTISEMENT

ನನ್ನನ್ನು 'ಇಮ್ಮೆಚ್ಯೂರ್‌' ಎಂದಿದ್ದ ಮಹಾತಾಯಿ ಬಗ್ಗೆ ಮಾತಾಡಲ್ಲ: ನಿಖಿಲ್‌

ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ನಿಖಿಲ್‌ ಮಂಡ್ಯದಲ್ಲಿ ಹೇಳಿದ್ದಾರೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 12:44 IST
Last Updated 14 ಫೆಬ್ರುವರಿ 2023, 12:44 IST
   

ಮಂಡ್ಯ: ‘2024ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಂಗಳವಾರ ಹೇಳಿದರು.

‘ನನ್ನನ್ನು ಅಪಕ್ವ (ಇಮ್ಮೆಚ್ಯೂರ್‌) ಎಂದಿದ್ದ ಮಹಾತಾಯಿ ಬಗ್ಗೆ ಮಾತನಾಡುವುದಿಲ್ಲ. ಹಿಂದಿನ ಚುನಾವಣೆ ಸಂದರ್ಭದಲ್ಲೂ ನಾನು ಮಾತನಾಡಿಲ್ಲ, ಮುಂದೆಯೂ ಮಾತನಾಡುವುದಿಲ್ಲ. ಅವರನ್ನು ಗೆಲ್ಲಿಸಿದ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ’ ಎಂದು ಸಂಸದೆ ಸುಮಲತಾ ಅವರನ್ನು ಪರೋಕ್ಷವಾಗಿ ಟೀಕಿಸಿದರು.

‘ಕಾಂಗ್ರೆಸ್‌, ಬಿಜೆಪಿ, ರೈತಸಂಘ ಒಟ್ಟಾಗಿ ಸೇರಿ ನನ್ನನ್ನು ಸೋಲಿಸಿದರು. ದೇಶದ ಇತಿಹಾಸದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಒಂದಾಗುತ್ತಾರೆ ಎಂದರೆ ಅದು ಮಂಡ್ಯದಲ್ಲಿ ಮಾತ್ರ. ಈ ಬಗ್ಗೆ ಕಾಂಗ್ರೆಸ್‌ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಕುಮಾರಣ್ಣ ಅವರು 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ, ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧಿಸುತ್ತಾರೆ. ಜನರ ಇಚ್ಛೆಯಂತೆ ನಾನು ರಾಮನಗರ ಕ್ಷೇತ್ರದಿಂದ ನಿಲ್ಲುತ್ತೇನೆ. ಕುಮಾರಣ್ಣ ಅವರು ರಾಜ್ಯದಾದ್ಯಂತ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಯುವಕರನ್ನು ಸಂಘಟಿಸುವುದಕ್ಕಾಗಿ ನಾನೂ ಪ್ರವಾಸ ಮಾಡುತ್ತೇನೆ’ ಎಂದರು.

‘ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಯಾರಿಗೆ ಟಿಕೆಟ್‌ ಕೊಡಬೇಕು, ಬೇಡ ಎಂದು ಹೇಳುವ ಅಧಿಕಾರ ನನಗೆ ಇಲ್ಲ. ಪಕ್ಷ ನನಗೆ ಕೊಟ್ಟಿರುವ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಣೆ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ನಟಿ ರಮ್ಯಾ ಸ್ಪರ್ಧಿಸುತ್ತಾರೆ ಎಂಬುದು ಮಾಧ್ಯಮ ಸೃಷ್ಟಿ, ನನ್ನ ಪ್ರಕಾರ ಅವರು ಸ್ಪರ್ಧೆ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.