ADVERTISEMENT

10 ಎಚ್‌ಪಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್: ಬಸವರಾಜ ಬೊಮ್ಮಾಯಿ

ಕಾಫಿ ಬೆಳೆಗಾರರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:45 IST
Last Updated 22 ಮಾರ್ಚ್ 2022, 19:45 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಹತ್ತು ಎಚ್‌ಪಿ ಪಂಪ್‌ಸೆಟ್‌ವರೆಗಿನ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಈ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ‘ಹತ್ತು ಎಚ್‌ಪಿ ಪಂಪ್‌ಸೆಟ್‌ವರೆಗೆ ಸೀಮಿತವಾಗಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ನೀಡಲು ನಮಗೆ ತಕರಾರು ಇಲ್ಲ. ಇದರಿಂದ ದುರುಪಯೋಗ ಆಗಬಾರದು. ಆದ್ದರಿಂದ ಕೆಲವು ನಿಬಂಧನೆಗಳನ್ನು ವಿಧಿಸಲಾಗುವುದು. ಅದನ್ನು ಒಪ್ಪಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ADVERTISEMENT

ರೈತರಿಗೆ ಉಚಿತ ವಿದ್ಯುತ್‌ ನೀಡುತ್ತಿರುವುದರಿಂದ ಸರ್ಕಾರದ ಮೇಲೆ ₹14 ಸಾವಿರ ಕೋಟಿಯಷ್ಟು ಹೊರೆ ಇದೆ. ಬಡ ರೈತರಿಗೆಂದು 2008ರಲ್ಲಿ ಸಬ್ಸಿಡಿ ಯೋಜನೆ ಘೋಷಣೆ ಮಾಡಲಾಗಿತ್ತು. ಕಾಫಿ ಬೆಳೆಯುವವರು ಸ್ಥಿತಿವಂತರಿರುತ್ತಾರೆ ಎಂಬ ಕಾರಣಕ್ಕೆ ಆಗ ಸೇರಿಸಿರಲಿಲ್ಲ ಎಂದರು.

ಶಾಸಕರಾದ ಎ.ಟಿ.ರಾಮಸ್ವಾಮಿ, ಸಿ.ಟಿ.ರವಿ. ಎಚ್‌.ಕೆ.ಕುಮಾರಸ್ವಾಮಿ. ಎಂ.ಪಿ. ಕುಮಾರಸ್ವಾಮಿ, ಕೆ.ಜೆ.ಬೋಪಯ್ಯ ಅವರೂ ವಿದ್ಯುತ್‌ ಸಬ್ಸಿಡಿಗಾಗಿ ಒತ್ತಾಯಿಸಿದರು.

ಸುನಿಲ್‌ ತುರ್ತುಸಭೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಹೊರಡಿಸಿದ ಬೆನ್ನಲ್ಲೇ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಈ ಯೋಜನೆ ವ್ಯಾಪ್ತಿಗೆಬರುವ ಫಲಾನುಭವಿ ರೈತರ ಸಂಖ್ಯೆಯ ಮಾಹಿತಿ ಪಡೆದರು. ರಾಜ್ಯದಲ್ಲಿ ಹತ್ತು ಎಚ್‌ಪಿ ಪಂಪ್‌ಸೆಟ್‌ ಹೊಂದಿರುವ 15 ಸಾವಿರ ಬೆಳೆಗಾರರು ಇದ್ದಾರೆ. ಇವರೆಲ್ಲರನ್ನೂ ಯೋಜನಾ ವ್ಯಾಪ್ತಿಗೆ ಸೇರಿಸಲಾಗುವುದು. ಇದಕ್ಕಾಗಿ ಶೀಘ್ರವೇ ಆದೇಶ ಹೊರಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಾಲೆ ದುರಸ್ತಿಗೆ ಸಹಕರಿಸದ ರೈತರು
ಮಂಡ್ಯ ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲಾ ಜಾಲದ 2 ನೇ ಹಂತದ ದುರಸ್ತಿ ಕಾಮಗಾರಿಗಳನ್ನು ನಡೆಸಲು ರೈತರು ಸಹಕರಿಸುತ್ತಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಈ ನಾಲೆ ದುರಸ್ತಿಗೆ ಒಂದು ವರ್ಷ ನೀರು ನಿಲ್ಲಿಸಬೇಕಾಗುತ್ತದೆ. ಈ ಭಾಗದ ರೈತರು ಒಂದು ವರ್ಷದ ಮಟ್ಟಿಗೆ ತ್ಯಾಗಕ್ಕೆ ಸಿದ್ಧರಾದರೆ ಕಾಮಗಾರಿ ನಡೆಸಬಹುದು. ಆದರೆ, ರೈತರು ಒಪ್ಪುತ್ತಿಲ್ಲ. ಈ ಕಾಮಗಾರಿ ನಡೆಸಲು ₹300 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಗುತ್ತಿಗೆದಾರರು ಸ್ಥಳಕ್ಕೆ ಹೋದರೆ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.

ಸ್ಥಳೀಯ ಜನಪ್ರತಿನಿಧಿಗಳು ರೈತರ ಮನವೊಲಿಸಬೇಕು. ವಿಧಾನಸಭೆಯಲ್ಲಿ ಶಾಸಕರು ಸರಿಪಡಿಸಿಕೊಡಿ ಎನ್ನುತ್ತಾರೆ. ಅಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ. ಈ ರೀತಿ ಆದರೆ ಕಷ್ಟವಾಗುತ್ತದೆ ಎಂದು ಜೆಡಿಎಸ್‌ನ ಡಿ.ಸಿ.ತಮ್ಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದರು.

ಸಕಲೇಶಪುರಕ್ಕೆ ಕಿಂಡಿ ಅಣೆಕಟ್ಟೆ
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಕಿಂಡಿ ಅಣೆಕಟ್ಟೆ ಕಟ್ಟಲು ತಾಂತ್ರಿಕವಾಗಿ ಶಕ್ಯವಾಗಿರುವ ಸೂಕ್ತ ಸ್ಥಳಗಳನ್ನು ಗುರುತಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

ಸಕಲೇಶಪುರದಲ್ಲಿ ಕಿಂಡಿ ಅಣೆಕಟ್ಟು ಮಾಡುವುದರಿಂದ ಅರಣ್ಯ ಪ್ರದೇಶ ನೀರಿನಲ್ಲಿ ಮುಳುಗಬಹುದು. ಅಲ್ಲದೆ ಆಳವೂ ಹೆಚ್ಚಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಆದರೂ ಕ್ಷೇತ್ರದ ಶಾಸಕರ ಬೇಡಿಕೆಯನ್ನು ತಳ್ಳಿ ಹಾಕಲು ಆಗುವುದಿಲ್ಲ. ಇದಕ್ಕೆ ಸುಮಾರು ₹8 ಕೋಟಿ ಬೇಕಾಗುತ್ತದೆ. ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.