ADVERTISEMENT

ಡಬ್ಲ್ಯುಎಚ್‌ಒ ವರದಿ ಆಧರಿಸಿ ನಿಯಂತ್ರಣ ಕ್ರಮ: ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 7:48 IST
Last Updated 30 ನವೆಂಬರ್ 2021, 7:48 IST
ಡಾ.ಕೆ. ಸುಧಾಕರ್‌
ಡಾ.ಕೆ. ಸುಧಾಕರ್‌   

ಬೆಂಗಳೂರು: ಓಮೈಕ್ರಾನ್‌ ತಳಿಯ ಕೊರೊನಾ ವೈರಾಣುವಿನ ತೀವ್ರತೆ ಮತ್ತು ಪರಿಣಾಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ವರದಿ ಪ್ರಕಟವಾದ ಬಳಿಕವೇ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳ ಕುರಿತು ನಿರ್ಧರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಓಮೈಕ್ರಾನ್‌ ತಳಿಯ ವೈರಾಣುವಿನ ಹರಡುವಿಕೆ ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವ ಹಾನಿ ಕುರಿತು ಈವರೆಗೂ ಅಧ್ಯಯನ ವರದಿ ಪ್ರಕಟವಾಗಿಲ್ಲ. ಡಿಸೆಂಬರ್‌ 1ರ ವೇಳೆಗೆ ಡಬ್ಲುಎಚ್‌ಓ ಅಧ್ಯಯನ ವರದಿ ಪ್ರಕಟವಾಗುವ ನಿರೀಕ್ಷೆ ಇದೆ. ಆ ಬಳಿಕವೇ ಹೊಸ ಕ್ರಮಗಳ ಕುರಿತು ಯೋಚಿಸಲಾಗುವುದು ಎಂದರು.

ಶಾಲಾ, ಕಾಲೇಜುಗಳು, ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆ, ವಿಧಾನಮಂಡಲದ ಬೆಳಗಾವಿ ಅಧಿವೇಶನ ನಡೆಸುವ ವಿಷಯದಲ್ಲಿ ಬದಲಾವಣೆ ಕುರಿತಂತೆ ಡಬ್ಲ್ಯುಎಚ್‌ಓ ವರದಿ ಆಧಾರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಮಂಗಳವಾರ ಬೆಳಿಗ್ಗೆ ಲಭಿಸಿರುವ ಮಾಹಿತಿ ಪ್ರಕಾರ, 18 ರಾಷ್ಟ್ರಗಳಲ್ಲಿ ಓಮೈಕ್ರಾನ್‌ ತಳಿಯ ಕೊರೊನಾ ವೈರಾಣು ಸೋಂಕು ಪತ್ತೆಯಾಗಿದೆ. ಈ ಕಾರಣದಿಂದ ಬೆಂಗಳೂರು ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳ ಜತೆಗೆ ಅಂತರರಾಜ್ಯ ಗಡಿಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ಅಗತ್ಯವಿದೆ ಎಂದರು.

ಕೋವಿಡ್‌ ನಿಯಂತ್ರಣ ಕ್ರಮಗಳು ಮತ್ತು ಚಿಕಿತ್ಸಾ ಸಿದ್ಧತೆ ಕುರಿತು ಚರ್ಚಿಸಲು ಇಂದು ಉನ್ನತಮಟ್ಟದ ಸಭೆ ನಡೆಸಲಾಗುವುದು. ಅಂತರರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ, ಸೋಂಕಿತರ ಚಿಕಿತ್ಸೆ ಮತ್ತು ಸೋಂಕಿಲ್ಲದವರ ಕ್ವಾರಂಟೈನ್‌ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರ ಜತೆಗೂ ಚರ್ಚಿಸಿ, ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.

ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಕೋವಿಡ್ ಪತ್ತೆಯಾಗಿರುವ ಇಬ್ಬರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ವಂಶವಾಹಿ ಅನುಕ್ರಮಣಿಕೆ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. ಇನ್ನೂ ವರದಿ ಬಂದಿಲ್ಲ. ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.